ಬೆಂಗಳೂರು:ಶಾಸಕ ಮುನಿರತ್ನ ಅವರಿಗೆ ಪಕ್ಷದಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ಮೂಲಕ ವಿವರಣೆ ಕೇಳಲಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಎಫ್ಎಸ್ಎಲ್ ವರದಿಯಲ್ಲಿ ಶಾಸಕ ಮುನಿರತ್ನ ತಪ್ಪು ಮಾಡಿರುವುದು ಕಂಡುಬಂದರೆ ಅವರಿಂದ ರಾಜೀನಾಮೆ ಕೇಳಿ, ಪಕ್ಷದಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅಶೋಕ್, ಸಿಎಂ ವಿರುದ್ಧವೇ ಮಾತನಾಡುತ್ತಿರುವ ಕೋಳಿವಾಡ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದು ಗ್ಯಾರಂಟಿ ಆಗಿದೆ. ಕಾಂಗ್ರೆಸ್ನಲ್ಲಿ ಸಿಎಂ ಆಗಬೇಕು ಎಂದು ಅನೇಕ ಮಂದಿ ಓಡಾಡುತ್ತಿದ್ದಾರೆ. ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಕಳೆದ 16 ತಿಂಗಳಿಂದ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಭಿವೃದ್ಧಿ ಮರೀಚಿಕೆ ಆಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ ಎಂದು ಕಿಡಿಕಾರಿದರು.
ಜಾತಿ ಜನಗಣತಿ ನಾನು ವಿರೋಧ ಮಾಡುತ್ತಿಲ್ಲ. ಇದರಲ್ಲಿ ಲೋಪ ಆಗಿದ್ದು, ನಮ್ಮ ಜಾತಿಯನ್ನು ಕಡೆಗಣಿಸಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಯಾವ ಜಾತಿ ಬೇಕಿದೆಯೋ ಅದನ್ನು ವೈಭವೀಕರಿಸಿದ್ದಾರೆ. ದ್ವೇಷ ಇರುವ ಜಾತಿಗಳನ್ನು ಕಡೆಗಣಿಸಿದ್ದಾರೆ. ಹಿಂದುಳಿದ ವರ್ಗದ ಚಾಂಪಿಯನ್ ಆಗುವುದಕ್ಕೆ ಹೋಗಬೇಡಿ. ನೀವೇ ಹೇಳಿ ವರದಿ ಮಾಡಿಸಿದ್ದಿರಾ ಅಂತ ನಿಮ್ಮ ಪಕ್ಷದವರೇ ಹೇಳಿದ್ದಾರೆ. ಜಾತಿ ಗಣತಿ ಬಗ್ಗೆ ನಿಮ್ಮಲ್ಲೇ ಗೊಂದಲ ಇದೆ. ಸ್ವಪಕ್ಷದವರಿಂದಲೇ ಜಾತಿ ಗಣತಿಗೆ ವಿರೋಧವಿದೆ. ವಾಲ್ಮೀಕಿ ಅಭಿವೃದ್ಧಿ ಹಗರಣದ ತನಿಖೆ ಆಗುತ್ತಿದೆ. ಮುಡಾ ಹಗರಣದಲ್ಲಿ ಲೊಕಾಯುಕ್ತ, ಇಡಿ ತನಿಖೆಯಾಗುತ್ತಿದೆ. ಇದೀಗ ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಸ್ಸಿ ಯಲ್ಲಿ ಒಳಮೀಸಲಾತಿ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಸ್ಟಿಗೆ ಇದ್ದ ಶೇ.3 ರ ಮೀಸಲಾತಿಯನ್ನು ಶೇ.7 ಮಾಡಿದ್ದೆವು. ಮೀಸಲಾತಿ ಹೆಚ್ಚು ಮಾಡಿದ್ದು ಬಿಜೆಪಿ. ಹಿಂದುಳಿದ ವರ್ಗದ ಪರ ಬಿಜೆಪಿ ನಿಂತಿದೆ. ಜಾತಿವಾರು ಕಾಂಗ್ರೆಸ್ ತಪ್ಪು ಮಾಡಿದೆ. ಎಸ್ ಸಿ ನಾಯಕರನ್ನು ಕಾಂಗ್ರೆಸ್ ನಲ್ಲಿ ಮೂಲೆಗುಂಪು ಮಾಡಿದ್ದಕ್ಕೆ ಹರಿಯಾಣದಲ್ಲಿ ತಕ್ಕ ಪಾಠ ಕಲಿಸಲಾಗಿದೆ ಎಂದು ಆರ್ ಅಶೋಕ್ ಟೀಕಿಸಿದರು.
ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಬಂದಿದ್ಯಾ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ಅಲ್ಲಿ ಕಾಂಗ್ರೆಸ್ಗೆ ಎಷ್ಟು ಸ್ಥಾನ ಬಂದಿದೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಮುಡಾ ಪ್ರಕರಣ: ತನಿಖೆಗೆ ಹಾಜರಾಗುವಂತೆ ಇಬ್ಬರಿಗೆ ಮೈಸೂರು ಲೋಕಾಯುಕ್ತದಿಂದ ನೋಟಿಸ್