ಬೆಂಗಳೂರು:ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಸ್ವಾಮೀಜಿಗಳೇ ಸ್ವಯಂಪ್ರೇರಣೆಯಿಂದ ಹೇಳಿದರೋ ಅಥವಾ ಡಿಕೆ ಶಿವಕುಮಾರ್ ಹೇಳಿಸಿದರೋ ಗೊತ್ತಿಲ್ಲ. ಆದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಎಂದೂ ಆಗಿರಲಿಲ್ಲ. ಮೊದಲ ಬಾರಿಗೆ ಸಿಎಂ ಎದುರಿಗೆ ನೀವು ರಾಜೀನಾಮೆ ನೀಡಿ ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಧರ್ಮಾರ್ಥರಾದರೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸ್ವಾಮೀಜಿ ಹೇಳಿಕೆ ವಿಚಾರ ಗಮನಿಸಿದ್ದೇನೆ. ಯಾವುದೋ ಗಾದೆ ಮಾತಿದೆ, ಕರೆದು ಬಿಟ್ಟು ಕೊಡು ಅನ್ನುವಂತೆ. ಇದು ಒಂದು ತಂತ್ರ. ಡಿಕೆ ಶಿವಕುಮಾರ್ ಅವರಿಗೆ ತಮ್ಮನ ಸೋಲು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಹೇಳಿಕೆಗಳು ಬರುತ್ತಿರಬಹುದು. ನಾಲ್ವರು ಡಿಸಿಎಂ ಆಗಬೇಕು ಅಂತ ಸಿದ್ದರಾಮಯ್ಯ ಅವರ ಬಣ ಹೇಳುತ್ತಿದೆ. ಅದಕ್ಕೆ ಕೌಂಟರ್ ಆಗಿ ಈ ಹೇಳಿಕೆ ಬಂದಿದೆ. ಧರ್ಮಾರ್ಥರಾಗಿದ್ದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕು ಅಂತ ಸ್ವಾಮೀಜಿ ಹೇಳಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಇರುವ ವೇದಿಕೆಯಲ್ಲಿ ಸ್ವಾಮೀಜಿ ಹೇಳಿದ ಮೇಲೆ ಸಿದ್ದರಾಮಯ್ಯ ಅವರಿಗೆ ಗೌರವ ಇದ್ರೆ, ರಾಜೀನಾಮೆ ಕೊಡೋದು ಒಳ್ಳೆಯದು. ಸಿಎಂ ಅವರಿಗೆ ಗೌರವ ಇದ್ದರೆ ವೇದಿಕೆಯಲ್ಲೇ ಹೇಳಿಕೆ ಕೊಡಬೇಕಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಿನ್ನಮತೀಯ ಟ್ರೂಪ್ ನಡುವೆ ವಾರ್ ನಡೀತಿದೆ. ಕಳೆದ ವಾರದಿಂದ ಎರಡೂ ಬಣದಲ್ಲಿ ಒಬ್ಬೊಬ್ಬರು ಒಂದೊಂದು ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ. ಸರ್ಕಾರದಲ್ಲಿ ನಯಾಪೈಸೆ ಅಭಿವೃದ್ಧಿ ಇಲ್ಲ. ಆದರೆ ಇದೆಲ್ಲಾ ನೋಡಿದರೆ ಸರ್ಕಾರಕ್ಕೆ ಕಂಟಕ ಇದೆ. ಈ ಸರ್ಕಾರ ತುಂಬಾ ದಿನ ಇರೋದಿಲ್ಲ ಅಂತ ನಾವು ಹೇಳುತ್ತಿದ್ದೆವು. ಈಗ ಅದು ಸ್ಪಷ್ಟವಾಗಿದೆ ಎಂದರು.
ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah