ದೊಡ್ಡಬಳ್ಳಾಪುರ :ಮಂಡ್ಯ ಜಿಲ್ಲೆಯ ಕೆರೆಗೋಡು ಬಾವುಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇಂದು ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು. ದೊಡ್ಡಬಳ್ಳಾಪುರದ ನೆಲದಾಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿವರೆಗೂ ಸಾಗಿ ಬಂತು. ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದು, ಕೇಸರಿ ಬಾವುಟವನ್ನ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಸಾಗಿದರು.
ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದವರು ಕಾಂಗ್ರೆಸ್ ಪಕ್ಷದವರು. ಕೆರೆಗೋಡು ಸುತ್ತಮುತ್ತಲಿನ 22 ಗ್ರಾಮದ ಜನರಿಂದ 100 ರೂಪಾಯಿ ದೇಣಿಗೆ ಸಂಗ್ರಹಿಸಿ 6 ಲಕ್ಷ ದೇಣಿಗೆ ಹಣದಲ್ಲಿ 108 ಅಡಿಗಳ ಧ್ವಜವನ್ನ ನಿರ್ಮಾಣ ಮಾಡಲಾಗಿತ್ತು. ಈ ಧ್ವಜಸ್ತಂಭ ಗ್ರಾಮಸ್ಥರಿಗೆ ಸೇರಿದ್ದೇ ಹೊರತು, ಚೆಲುವನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳು ಬಂದಾಗ ರಾಷ್ಟ್ರ ಬಾವುಟ ಮತ್ತು ನಾಡ ಬಾವುಟವನ್ನ ಹಾರಿಸಲಾಗುತ್ತಿತ್ತು. ಅನಂತರ ಹನುಮಂತನ ಬಾವುಟವನ್ನ ಹಾರಿಸಲಾಗುತ್ತಿತ್ತು. ಹನುಮಂತ ಹುಟ್ಟಿದ್ದ ನಾಡಲ್ಲಿ ಹನುಮನ ಬಾವುಟ ಹಾರಿಸುವುದಕ್ಕೆ ಕಾಂಗ್ರೆಸ್ ಪಕ್ಷವನ್ನ ಕೇಳಬೇಕಾ?. ದೇವಸ್ಥಾನದಿಂದ 40 ಅಡಿಗಳ ಅಂತರದಲ್ಲಿ ಹನುಮಂತನ ಬಾವುಟವನ್ನ ಹಾರಿಸಲಾಗಿದೆ ಎಂದು ಹೇಳಿದ್ದಾರೆ.