ಕರ್ನಾಟಕ

karnataka

ETV Bharat / state

ಸರ್ಕಾರ ಹುಚ್ಚರ ಸಂತೆಯಾಗಿದೆ: ಆರ್. ಅಶೋಕ್, ಬೊಮ್ಮಾಯಿ ಕಿಡಿ - OPPOSITION LEADER SLAMS GOVT

ಎಂಎಲ್​ಸಿ ಸಿ.ಟಿ.ರವಿ, ಶಾಸಕ ಮುನಿರತ್ನ ಮೊಟ್ಟೆ ಎಸೆತ ಪ್ರಕರಣ ಸೇರಿದಂತೆ ಹಲವು ಘಟನೆಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದ್ದಾರೆ.

SLAM STATE GOVT
ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ (ETV Bharat)

By ETV Bharat Karnataka Team

Published : Dec 25, 2024, 6:58 PM IST

ಬೆಂಗಳೂರು: ಶಕ್ತಿ ಯೋಜನೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ಸಾರಿಗೆ ನೌಕರರು ಪ್ರತಿಭಟಿಸುತ್ತಿದ್ದಾರೆ. ಯಾಮಾರಿಸುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದವರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರ್ಥಿಕ ನಷ್ಟದಲ್ಲಿದೆ. ಬಸವರಾಜ ರಾಯರೆಡ್ಡಿ ಅವರು ಹಲವು ಬಾರಿ ಹೇಳಿದರೂ ಸಿಎಂ ಸಿದ್ದರಾಮಯ್ಯ ಕೇಳಿಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ನಷ್ಟ ಉಂಟಾಗಿದೆ. ಸಾರಿಗೆ ನೌಕರರು ಧರಣಿ ಮಾಡುತ್ತಿದ್ದು, ಅವರಿಗೆ 4 ಸಾವಿರ ಕೋಟಿ ರೂ. ನೀಡಬೇಕು. ರೈತರಿಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನಾಮ ಹಾಕಿದ್ದಾರೆ ಎಂದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಮಾತನಾಡುತ್ತಿರುವುದು (ETV Bharat)

ನಾಮ ಹಾಕುವುದರಲ್ಲಿ ಕಾಂಗ್ರೆಸ್​ನವರು ಪಳಗಿದವರು. ಹಾಗಾಗಿ ಈ ವರ್ಷ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮುಂದಿನ ವರ್ಷ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿ 2 ಲಕ್ಷ ಕೋಟಿ ರೂ. ಸಾಲ ಮಾಡಿದರೆ ಕರ್ನಾಟಕ ಜನ್ಮದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ದೂರಿದರು.

ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಸರಿಯಲ್ಲ: ಕರ್ನಾಟಕಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದವರ ಹೆಸರನ್ನು ತೆಗೆದು ಕೆ. ಆರ್. ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹಾಗೇನಾದರೂ ಹೆಸರು ಇಡಬೇಕು ಎಂದಿದ್ದರೆ ಹೊಸ ರಸ್ತೆಯೊಂದನ್ನು ನಿರ್ಮಿಸಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನು ಇಡಲಿ. ಮಹಾರಾಜರ ಕುಟುಂಬ ಈ ನಾಡಿಗೆ ಸೇವೆ ಸಲ್ಲಿಸಿದೆ, ಅನ್ನ-ನೀರು ಕೊಟ್ಟಿದೆ. ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಆ ಕುಟುಂಬವನ್ನು ಗುರಿ ಮಾಡಬಾರದು. ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆಂದರೆ ಜನರಿಗೆ ಅವರ ಬಗ್ಗೆ ಇರುವ ಭಾವನೆ ಬದಲಾಗುತ್ತದೆ ಎಂದರು.

ಸರ್ಕಾರ ಹುಚ್ಚರ ಸಂತೆಯಾಗಿದೆ. ಸಿ. ಟಿ. ರವಿ ಮೇಲೆ ಸುಮಾರು ನಲ್ವತ್ತು-ಐವತ್ತು ಜನ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ಇದರಲ್ಲಿ ಸಚಿವರು ಮತ್ತು ಅವರ ಪಿಎ ಪಾತ್ರ ಇದೆ. ಈ ಪ್ರಕರಣದಲ್ಲಿ ಅದೇ ಠಾಣೆಯಲ್ಲಿ ಎಫ್ಐಆರ್ ಮಾಡಬೇಕೆಂದು ಆಗ್ರಹಿಸಿದ್ದೆವು. ನಮ್ಮನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ಕಾಯಿಸಿ,‌ ನಂತರ ದೂರು ಸ್ವೀಕರಿಸಿದ್ದರು. ಸರ್ಕಾರಕ್ಕೆ ಬುದ್ಧಿ ಭ್ರಮಣೆಯಾಗಿದೆ. ಪೊಲೀಸ್ ಠಾಣೆಗಳು ಸುರಕ್ಷಿತ ಅಲ್ಲ. ಯಾರಾದರೂ ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ರೂಲ್ಸ್ ಮಾಡಿದ್ದಾರೆ. ಗೃಹ ಸಚಿವರನ್ನು ಏನೂ ಕೇಳಿದರೂ ತಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಅಶೋಕ್​ ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದಲ್ಲಿ ಎರಡು ರೀತಿಯ ಕಾಂಗ್ರೆಸ್ ಇದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಕಾಂಗ್ರೆಸ್ ಇತ್ತು. ಈಗ ಜನ ವಿರೋಧಿ, ದೇಶ ವಿರೋಧಿ ಕಾಂಗ್ರೆಸ್ ಇದೆ ಎಂದು ಕಿಡಿಕಾರಿದರು.

1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದ ಶತಮಾನೋತ್ಸವವನ್ನು ಕಾಂಗ್ರೆಸ್ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಈಗಿನದು ಜನ ವಿರೋಧಿ ಮತ್ತು ದೇಶ ವಿರೋಧಿ ಕಾಂಗ್ರೆಸ್ ಆಗಿದೆ ಎಂದು ಟೀಕಿಸಿದರು.

ದುರಾಡಳಿತ ಮಿತಿಮೀರಿದೆ :ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನವರ ದುರಾಡಳಿತ ಮಿತಿ ಮೀರುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎನ್ನುವ ಕನಿಷ್ಠ ಜ್ಞಾನ ಇವರಿಗೆ ಇಲ್ಲ ಎಂದರೆ, ಇವರು ನೂರನೇ ವರ್ಷಾಚರಣೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಹಲವಾರು ಶಾಕ್ : ಕಲಬುರಗಿಯಲ್ಲಿ ಮಹಿಳೆಗೆ ರಸ್ತೆಯಲ್ಲಿ ವಿದ್ಯುತ್ ಶಾಕ್ ಹೊಡೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಕೇವಲ ವಿದ್ಯುತ್ ಶಾಕ್ ಅಷ್ಟೇ ಅಲ್ಲ, ಹಲವಾರು ಶಾಕ್​ಗಳನ್ನು ಕೊಟ್ಟಿದೆ. ಬಾಣಂತಿಯರಿಗೆ ಕಪ್ಪು ಪಟ್ಟಿಗೆ ಸೇರಿದ ಕಂಪನಿ ಸರಬರಾಜು ಮಾಡಿರುವ ಅವಧಿ ಮೀರಿದ ಔಷಧಗಳನ್ನು ನೀಡಿ ಶಾಕ್ ಕೊಟ್ಟಿದೆ. ಇದು ಈ ಸರ್ಕಾರದಲ್ಲಿ ಸಾಮಾನ್ಯ ಜನರು ಸುರಕ್ಷಿತವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಕಾನೂನು ಸುವ್ಯವಸ್ಥೆ, ರಸ್ತೆ, ಕುಡಿಯುವ ನೀರು, ಆರೋಗ್ಯ, ವಿದ್ಯುತ್ ಯಾವ ವಿಚಾರದಲ್ಲಿಯೂ ಜನರು ಸುರಕ್ಷಿತವಾಗಿಲ್ಲ ಎಂದರು.

ಇದನ್ನೂ ಓದಿ:ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ: ಮೂವರು ಕಿಡಿಗೇಡಿಗಳ ಬಂಧನ - EGG ATTACK ON BJP MLA MUNIRATHNA

ABOUT THE AUTHOR

...view details