ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಇಂದು ಗೌರವಾನ್ವಿತ ನ್ಯಾಯಮೂರ್ತಿ ಪ್ರತಿನಿಧಿ ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜಭವನದ ಗಾಜಿನ ಮನೆಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ. ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದರಾಜ್, ನಸೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ ವಂಕಟೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು, ವಕೀಲರು, ಗಣ್ಯರು, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿನಿಧಿ ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಅವರು ರಾಜ್ಯ ಉಚ್ಛ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ, ಕೇಂದ್ರ ಸರ್ಕಾರ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಫೆಬ್ರವರಿ 24 ರಂದು ಪಿ ಎಸ್ ದಿನೇಶ್ ಕುಮಾರ್ ಅವರು ಸೇವೆಯಿಂದ ನಿವೃತ್ತರಾಗಲಿದ್ದು, ಕೆಲ ದಿನಗಳವರೆಗೆ ಮಾತ್ರ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.