ಶಿವಮೊಗ್ಗ: ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನು ಮಾತ್ರ ಪರಿಗಣಿಸುವಂತೆ ಆಗ್ರಹಿಸಿ, ಕರ್ನಾಟಕ ಅರಣ್ಯ ಗಾರ್ಡ್ಸ್ ಮತ್ತು ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ನಡೆಸಿದೆ.
ಜಿಲ್ಲೆ ಇರುವಕ್ಕಿಯ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿವಿಯ ಬಿಎಸ್ಸಿ ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಇರುವಕ್ಕಿ ವಿವಿಯ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಇಂದು ಶಿವಮೊಗ್ಗ ನಗರದ ಸೈನ್ಸ್ ಮೈದಾನದಿಂದ ಪ್ರತಿಭಟನ ಮೆರವಣಿಗೆ ಪ್ರಾರಂಭಿಸಿ, ವಿವಿಧ ರಸ್ತೆಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳನ್ನು ಶೇ. 50ರಷ್ಟು ಪರಿಗಣಿಸಲಾಗುತ್ತಿತ್ತು. ಅಲ್ಲದೆ ರಾಜ್ಯ ಸರ್ಕಾರ ಅರಣ್ಯ ಶಾಸ್ತ್ರ ಪದವೀಧರರ ನೇಮಕಾತಿಯಲ್ಲಿ ಶೇ.75 ರಷ್ಟು ಇದ್ದ ಮೀಸಲಾತಿಯನ್ನು ಶೇ. 50ಕ್ಕೆ ಇಳಿಕೆ ಮಾಡುವ ಮೂಲಕ ತಮ್ಮ ಉದ್ಯೋಗಕ್ಕೆ ಕತ್ತರಿ ಹಾಕಿದಂತಾಗಿದೆ. ಇದರಿಂದ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಹುದ್ದೆ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯ ಶಾಸ್ತ್ರದ ಓದಿದವರಿಗೆ ಶೇ. 100 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆ ಕುರಿತು ವಿದ್ಯಾರ್ಥಿನಿ ನಯನ ಎಂಬುವರು ಮಾತನಾಡಿ, ''ಅರಣ್ಯ ಶಾಸ್ತ್ರ ಪದವಿ ಸೇರುವವರು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಬಂದಿರುತ್ತೇವೆ. ವರ್ಷದಿಂದ ವರ್ಷಕ್ಕೆ ಈ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಬಿಎಸ್ಸಿ( ಅರಣ್ಯ ಶಾಸ್ತ್ರ) ಪದವಿಯನ್ನೇ ಬೇರೆ ವಿಷಯಗಳಿಗಿಂತ ಹೆಚ್ಚು ಆಸಕ್ತಿಯಿಂದ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಇಲ್ಲಿಗೆ ಪ್ರತಿಭಾವಂತ ವಿದ್ಯಾರ್ಥಿಗಳೇ ಬರುತ್ತಿದ್ದಾರೆ.
ತೋಟಗಾರಿಕೆ, ಮೀನುಗಾರಿಕೆ ಇಲಾಖೆಯ ನೇಮಕಾತಿಯಲ್ಲಿ ಆಯಾ ವಿಷಯಗಳ ವಿದ್ಯಾರ್ಥಿಗಳಿಗೆ ಶೇ. 100ರಷ್ಟು ಅವಕಾಶ ನೀಡಲಾಗುತ್ತಿದೆ. ಅರಣ್ಯ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ಮಾತ್ರ ಕಾಯ್ದೆಯಂತೆ ಅರಣ್ಯ ವಿಷಯ ಪದವೀಧರರನ್ನೇ ನೇಮಕ ಮಾಡಬೇಕೆಂದು ಹೇಳುತ್ತದೆ. ಆದರೆ ಅದನ್ನು ಮಾಡದೆ, ಅರಣ್ಯ ವಿಷಯಗಳನ್ನು ಓದಿದವರ ಜೊತೆ ಇತರೆ ವಿಷಯಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿರುವುದು ಸರಿಯಲ್ಲ.
67 ವಿಷಯಗಳನ್ನು ಕಲಿಯುತ್ತೇವೆ : ನಾಲ್ಕು ವರ್ಷ ಅರಣ್ಯದ ವಿಷಯದಲ್ಲಿ ಅನುಭವವನ್ನು ಪಡೆದಿರುತ್ತೇವೆ. ಅಲ್ಲದೆ ಸರ್ಕಾರ ನಮ್ಮ ಮೇಲೆ 6-7 ಲಕ್ಷ ಹಣ ಖರ್ಚು ಮಾಡುತ್ತಿದೆ. ಇಷ್ಟಾಗಿದ್ದರೂ ಸಹ ಸರ್ಕಾರ ಹುದ್ದೆ ವಿಚಾರದಲ್ಲಿ ನಮ್ಮನ್ನು ಪರಿಗಣಿಸದೆ ಇರುವುದರಿಂದ ನಾವು ಈ ವಿಷಯವನ್ನು ಏಕೆ ಕಲಿಯಬೇಕು ಎನಿಸುತ್ತದೆ. ನಾವು ಇಲ್ಲಿ 67 ವಿಷಯಗಳನ್ನು ಕಲಿಯುತ್ತೇವೆ. ಆದರೂ ಸಹ ಸರ್ಕಾರ ನಮ್ಮನ್ನು ನಿರುದ್ಯೋಗಿಗಳಾಗಿ ಮಾಡುತ್ತಿರುವುದು ಎಷ್ಟು ಸರಿ? ಎಂಬುದು ನಮ್ಮ ಪ್ರಶ್ನೆಯಾಗಿದೆ'' ಎಂದಿದ್ದಾರೆ.
ಇದನ್ನೂ ಓದಿ :ಅರಣ್ಯ ಇಲಾಖೆ ಹುದ್ದೆಗಳ ನೇಮಕದಲ್ಲಿ ಗೋಲ್ಮಾಲ್: ಎಸಿಬಿಗೆ ದೂರು