ಬೆಳಗಾವಿ: ವಿಶ್ವಗುರು ಬಸವಣ್ಣನವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಬೆಳಗಾವಿಯಲ್ಲಿ ವಿವಿಧ ಲಿಂಗಾಯತ ಪರ ಸಂಘಟನೆಗಳ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ, ಜಾಗತಿಕ ಲಿಂಗಾಯತ ಮಹಾಸಭಾ, ಚನ್ನಬಸವ ಫೌಂಡೇಶನ್, ಬಸವ ಕಾಯಕ ಜೀವಿಗಳ ಸಂಘ, ಹಡಪದ ಸಮಾಜದ ವತಿಯಿಂದ ನಗರದ ಚೆನ್ನಮ್ಮ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲಿಂಗಾಯತ ವಿರೋಧಿ ಯತ್ನಾಳ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ಕೂಡ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಸತ್ಯಕ್ಕ ಮಾತಾಜಿ, ಬಸವಣ್ಣನವರು ಹೊಳೆ ಹಾರಿದ್ದನ್ನು ಯತ್ನಾಳ್ ನೋಡಿದ್ದರೇನು? ಹೀಗೆ ಹೇಳುವ ಯತ್ನಾಳ್ ಇದಕ್ಕೆ ಸಾಕ್ಷಿ ತೆಗೆದುಕೊಂಡು ಬರಬೇಕು. ಬಸವಣ್ಣ ಹೇಡಿ ಆಗಿರಲಿಲ್ಲ. 'ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೆ ಈಗಲೇ ಬರಲಿ' ಎಂದವರು. ಶಾಸಕ ಸ್ಥಾನದಿಂದ ಯತ್ನಾಳ್ ಅವರನ್ನು ತಕ್ಷಣ ವಜಾಗೊಳಿಸಬೇಕು. ಇನ್ಮುಂದೆ ಲಿಂಗಾಯತ ಧರ್ಮದ ಶಾಸಕ ಎಂದು ಅವರನ್ನು ಯಾರೂ ಕರೆಯಬಾರದು. ವಿನಾಕಾರಣ ಹೇಳಿಕೆ ನೀಡುವುನ್ನು ಬಿಟ್ಟು, ವಚನ ಸಾಹಿತ್ಯ ಓದಿ ಬುದ್ಧಿ ಕಲಿಯಲಿ ಎಂದು ಒತ್ತಾಯಿಸಿದರು.