ಕರ್ನಾಟಕ

karnataka

ETV Bharat / state

ಕಪ್ಪತಗುಡ್ಡದದಲ್ಲಿ ಗಣಿಗಾರಿಕೆ ಪ್ರಸ್ತಾವನೆ ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ - PROTEST AGAINST GOVERNMENT

ನಂದಿವೇರಿ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

Protest against Government demanding withdrawal of mining in Kappatagudda proposal
ಕಪ್ಪತಗುಡ್ಡದ ಗಣಿಗಾರಿಕೆ ಹಿಂಪಡೆಯುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ (ETV Bharat)

By ETV Bharat Karnataka Team

Published : Nov 21, 2024, 4:33 PM IST

Updated : Nov 21, 2024, 5:26 PM IST

ಬೆಳಗಾವಿ: ಆಮ್ಲಜನಕದ ಖಜಾನೆ, ಜೀವವೈವಿಧ್ಯಗಳ ತಾಣ "ಕಪ್ಪತಗುಡ್ಡ" ಉಳಿವಿಗಾಗಿ ಮತ್ತೆ ಹೋರಾಟ ಆರಂಭವಾಗಿದೆ. ಅಪಾರ ವನಸ್ಪತಿ ಖನಿಜ ಇರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬೆಳಗಾವಿ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿ ಇಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ನಂದಿವೇರಿ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು, ’’ಉಳಿಸಿ ಉಳಿಸಿ ಕಪ್ಪತ್ತಗುಡ್ಡ ಉಳಿಸಿ, ನಮ್ಮದು ನಮ್ಮದು ಕಪ್ಪತಗುಡ್ಡ ನಮ್ಮದು‘‘ ಎಂದು ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ವಿವಿಧ ಸಂಘಟನೆಗಳ ಸಾಥ್​:ಪ್ರತಿಭಟನೆಯಲ್ಲಿ ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಪರಿಸರವಾದಿಗಳು ಸಾಥ್ ಕೊಟ್ಟಿದ್ದರು. ಕಪ್ಪತಗುಡ್ಡವು 80 ಸಾವಿರ ಎಕರೆ ಪ್ರದೇಶ ಹೊಂದಿದ್ದು, ಮುಂಡರಗಿ-ಗದಗ-ಶಿರಹಟ್ಟಿ ತಾಲ್ಲೂಕಿನಲ್ಲಿ ವ್ಯಾಪಿಸಿದೆ. ಆದರೆ, ಇಲ್ಲಿನ ವಾತಾವರಣ ಉತ್ತರ ಕರ್ನಾಟಕದ 15 ಜಿಲ್ಲೆಗಳ ವಾತಾವರಣದ ಸಮತೋಲತೆಯನ್ನು ಕಾಯ್ದುಕೊಳ್ಳುತ್ತದೆ. ಆದರೆ, ರಾಜ್ಯ ಸರ್ಕಾರ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಗಣಿಗಾರಿಕೆ ಮಾಡುವುದನ್ನು ಕೈ ಬಿಡುವಂತೆ ನಿರ್ಣಯ ಕೈಗೊಳ್ಳುವಂತೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಪ್ಪತಗುಡ್ಡದ ಗಣಿಗಾರಿಕೆ ಹಿಂಪಡೆಯುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ (ETV Bharat)

ಈ ವೇಳೆ ಮಾತನಾಡಿದ ಶಿವಕುಮಾರ ಸ್ವಾಮೀಜಿ, "ಸರ್ಕಾರ ಯಾವುದೇ ಕಾರಣಕ್ಕೂ ಕಪ್ಪತಗುಡ್ಡಕ್ಕೆ ಕೈ ಹಾಕಬಾರದು. ಗಣಿಗಾರಿಕೆಗೆ ಅವಕಾಶ ನೀಡದೇ ಗುಡ್ಡವನ್ನು ಉಳಿಸಿ, ಬೆಳೆಸಬೇಕು. ಈಗಾಗಲೇ ಬಳ್ಳಾರಿ ಮತ್ತು ಸಂಡೂರ ಗುಡ್ಡವನ್ನು ಕಳೆದುಕೊಂಡ ನೋವಿದೆ. ಈಗ ಕಪ್ಪತಗುಡ್ಡದಲ್ಲೂ ಅನ್ಯಾಯ ಆಗಲು ನಾವು ಬಿಡುವುದಿಲ್ಲ. 7 ಕೋಟಿ ಕನ್ನಡಿಗರು ಕಪ್ಪತಗುಡ್ಡದ ಪರವಿದ್ದು, ರಾಜ್ಯದ ಜನರನ್ನು ವಿರೋಧಿಸಿ ಆಡಳಿತ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಹಿಂದೆ ಹೋರಾಟ ಮಾಡಿದ್ದಕ್ಕೆ ಈಗ ಕಪ್ಪತಗುಡ್ಡ ವನ್ಯಜೀವಿ ಧಾಮ ಆಗಿದೆ. ಹಾಗಾಗಿ, ಇದನ್ನು ಸಂಪೂರ್ಣವಾಗಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು" ಎಂದು ಒತ್ತಾಯಿಸಿದರು.

ಹೋರಾಟಗಾರ ರುದ್ರಣ್ಣ ಗುಳಗುಳಿ ಮಾತನಾಡಿ, "ದೆಹಲಿಯಲ್ಲಿ ಸಂಪೂರ್ಣ ವಿಷಪೂರಿತ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಅಪಾಯಕಾರಿ ಸ್ಥಿತಿಯಿದೆ. ಇಡೀ ಏಷಿಯಾ ಖಂಡದಲ್ಲೇ ಅತ್ಯಂತ ಶುದ್ಧ ಆಮ್ಲಜನಕ ಮತ್ತು ಸಸ್ಯ ಸಂಪತ್ತು ಕಪ್ಪತಗುಡ್ಡ ಹೊಂದಿದೆ. ಹಾಗಾಗಿ, ಇಲ್ಲಿ ಗಣಿಗಾರಿಕೆ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಡಬೇಕು. ಇಲ್ಲದಿದ್ದರೆ ಚಳಿಗಾಲ ಅಧಿವೇಶನ ವೇಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಂಕರ ಕುಂಬಿ, ಸರಸ್ವತಿ ಪೂಜಾರ, ಕೆ.ಎಚ್.ನಾಯಕ, ಆರ್.ಜಿ‌.ತಿಮ್ಮಾಪುರ, ಲಿನ್ನೆಟ್ ಡಿಸಿಲ್ವಾ, ಸಪ್ನಾ ಕರಬಶೆಟ್ಟರ, ಪ್ರಮೀಳಾ ಜಕ್ಕನ್ನವರ ಸೇರಿ ಹಲವು ಹೋರಾಟಗಾರರು ಭಾಗವಹಿಸಿದ್ದರು.

ಇದನ್ನೂ ಓದಿ:ರಾಯಚೂರು: ಪಿಡಿಒ ಪರೀಕ್ಷೆ ವೇಳೆ ಪ್ರತಿಭಟನೆ ನಡೆಸಿದ್ದ 12 ಪರೀಕ್ಷಾರ್ಥಿಗಳ ವಿರುದ್ಧ ಪ್ರಕರಣ

Last Updated : Nov 21, 2024, 5:26 PM IST

ABOUT THE AUTHOR

...view details