ಕರ್ನಾಟಕ

karnataka

ETV Bharat / state

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂವಿಧಾನಕ್ಕೆ ಅಪಚಾರ: ಹಿರಿಯ ವಕೀಲ ಸಿಂಘ್ವಿ ವಾದ - CM Siddaramaiah Plea Hearing - CM SIDDARAMAIAH PLEA HEARING

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ ಸಂಬಂಧ ರಾಜ್ಯಪಾಲರು ಅನುಮತಿ ನೀಡಿರುವ ಪ್ರಾಸಿಕ್ಯೂಷನ್​ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯುತ್ತಿದೆ.

prosecution
ಹೈಕೋರ್ಟ್, ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Sep 12, 2024, 3:03 PM IST

Updated : Sep 12, 2024, 3:09 PM IST

ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಮುಖ್ಯಮಂತ್ರಿಗಳ ನೇರ ಪಾತ್ರ, ಯಾವ ಕಡತಗಳಿಗೆ ಸಹಿ ಹಾಕಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡದೆ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗಿದೆ ಎಂದು ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿವೇಶನ ಪಡೆದ ಆರೋಪ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ನಡೆಯಿತು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಸಿಂಘ್ವಿ, ''ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ವಿವೇಚನೆ ಬಳಸಿಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಅದನ್ನು ಹೇಗೆ ಬಳಸಿದೆ ಎಂಬುದನ್ನು ಅವರ ಆದೇಶದಲ್ಲಿ ತಿಳಿಸಬೇಕಾಗಿತ್ತು. ಅಲ್ಲದೆ, ಇತರೆ ರಾಜಕಾರಣಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಆದರೆ, ಈ ಸಂಬಂಧ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂಬ ಅಂಶವನ್ನು ತಿಳಿಸಿಲ್ಲ. ರಾಜ್ಯಪಾಲರ ಐದಾರು ಪುಟದ ಆದೇಶದಲ್ಲಿ ಬೇರೆ ಯಾವುದೇ ಅಂಶಗಳು ಇಲ್ಲ'' ಎಂದು ವಿವರಿಸಿದರು.

ಸಿದ್ದರಾಮಯ್ಯ ವಿರುದ್ಧ ಮಾತ್ರ ಆರೋಪವೇಕೆ?:''ರಾಜ್ಯಪಾಲರು ಸಚಿವ ಸಂಪುಟದ ಆದೇಶ ಪಾಲಿಸಬೇಕಿಲ್ಲ ಎಂದು ಹೇಳಿದ್ದಾರೆ. ಆದರೆ, ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವೇನು ಎಂಬುದನ್ನು ತಿಳಿಸಿಲ್ಲ. ಯಾವುದಾದರೂ ಕಡತಕ್ಕೆ ಸಿದ್ದರಾಮಯ್ಯ ಹಾಕಿದ್ದಾರೆಯೇ ಎಂಬ ಅಂಶವನ್ನು ವಿವರಿಸಿಲ್ಲ. ಹೀಗಾಗಿ, ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರವಾಗುವಂತೆ ನಡೆದುಕೊಂಡಿದ್ದಾರೆ. ರಾಜ್ಯಪಾಲರು ಕೇವಲ ಮಧ್ಯಪ್ರದೇಶ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಪ್ರಕರಣ ಆಧಾರವನ್ನಾಗಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜಕೀಯದಲ್ಲಿ ಕಳೆದ 23 ವರ್ಷಗಳಲ್ಲಿ 23 ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರಬಹುದು. ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತ್ರ ಆರೋಪಿಸಲಾಗಿದೆ. 1984ರಿಂದಲೂ ಸಿದ್ದರಾಮಯ್ಯ ಶಾಸಕರಾಗಿದ್ದಾರೆ. ಆದರೆ ಅವರು ಮುಡಾಗೆ ಸಂಬಂಧಿಸಿದ ಯಾವುದೇ ಹೊಣೆ ನಿಭಾಯಿಸಿಲ್ಲ'' ಎಂದು ಪೀಠಕ್ಕೆ ವಿವರಿಸಿದರು.

ತನಿಖೆ ಅಗತ್ಯತೆ ನಿರ್ಧರಿಸಿ ಅನುಮತಿ ನೀಡಬಹುದಿತ್ತು: ''ರಾಜ್ಯಪಾಲರ ಆದೇಶದಲ್ಲಿ ಒಂದೇ ಒಂದು ಕಾರಣವಿಲ್ಲವನ್ನು ವಿವರಿಸಿಲ್ಲ. ಆದರೂ, ರಾಜ್ಯಪಾಲರ ಕಡತದಲ್ಲಿ ಕಾರಣಗಳಿವೆ ಎನ್ನಲಾಗುತ್ತಿದೆ. ರಾಜ್ಯಪಾಲರು 50 ಪುಟಗಳ ಆದೇಶ ನೀಡಬೇಕೆಂದು ನಾವು(ಅರ್ಜಿದಾರರು) ಹೇಳುತ್ತಿಲ್ಲ. ಅವರ ಸಾವಿರ ಪುಟಗಳ ಕಡತದಲ್ಲೇನಿದೆ ಎಂಬುದನ್ನು ತಿಳಿಸಬೇಕಾಗಿತ್ತು. ಲಲಿತಾ ಕುಮಾರಿ ಪ್ರಕರಣಕ್ಕೂ ಪಿಸಿ ಸೆಕ್ಷನ್ 17ಎ ಪ್ರಕ್ರಿಯೆಗೂ ಸಂಬಂಧವಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುನ್ನ ತನಿಖಾಧಿಕಾರಿ ಅಭಿಪ್ರಾಯ ಪಡೆದುಕೊಳ್ಳಬೇಕು. ತನಿಖೆ ನಡೆಸುವ ಅಗತ್ಯದ ಬಗ್ಗೆ ನಿರ್ಧರಿಸಿದ ಬಳಿಕ ಅನುಮತಿ ಕೋರಬಹುದಾಗಿತ್ತು. ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು. ಖಾಸಗಿ ವ್ಯಕ್ತಿಗಳಿಂದ ದಾಖಲಾಗುವ ದೂರಿಗೆ ಅವಕಾಶ ಕೊಟ್ಟರೆ ಪಿಸಿ 17ಎ ನ ಅಡಿಯಲ್ಲಿ ರಕ್ಷಣೆ ನೀಡುವುದಕ್ಕೆ ಅವಕಾಶವಿಲ್ಲ'' ಎಂದು ಪೀಠಕ್ಕೆ ಅವರು ತಿಳಿಸಿದರು.

''ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ವಿಶೇಷ ಸಂದರ್ಭದಲ್ಲಷ್ಟೇ ಬಳಸಬೇಕು. ಹಾಗೆ ಬಳಸಿದಾಗ ಅದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ. ಪರಿಶೀಲಿಸಿದ ಕಡತದಲ್ಲಿನ ಒಂದೇ ಒಂದೇ ಪದವನ್ನೂ ಆದೇಶದಲ್ಲಿ ಉಲ್ಲೇಖಿಸಿಲ್ಲ. ಸಾವಿರ ಪುಟಗಳನ್ನು ಪರಿಶೀಲಿಸಿ ಆದೇಶ ನೀಡಿರಬಹುದು. ಆದರೆ ಅವರು ನೀಡದ ಕಾರಣವನ್ನು ಸಾವಿರ ಪುಟಗಳಲ್ಲಿ ಹುಡುಕಲಾಗದು'' ಎಂದು ಸಿಂಘ್ವಿ ವಿವರಿಸಿದರು.

ರಾಜ್ಯಪಾಲರು ಕಾರಣಸಹಿತ ಹೇಳಬೇಕಿತ್ತು:''ರಾಜ್ಯಪಾಲರು ಒಂದು ಪ್ಯಾರಾದಲ್ಲಿ ಮಧ್ಯಪ್ರದೇಶ ಎಸ್ಟಾಬ್ಲಿಷ್ ಮೆಂಟ್ ಪ್ರಕರಣ ಉಲ್ಲೇಖಿಸಿದ್ದಾರೆ. ಆದರೆ ತಾವೇ ತಾರತಮ್ಯಪೂರಿತ ಆದೇಶವನ್ನು ನೀಡಿದ್ದಾರೆ. ಈ ಅಂಶಗಳು ಮೇಲ್ನೋಟಕ್ಕೆ ತರ್ಕರಹಿತವಾದ ಅನುಮತಿ ನೀಡಿದ್ದಾರೆ ಎಂಬುದನ್ನು ತಿಳಿಸುತ್ತವೆ. ಸಚಿವ ಸಂಪುಟದ ಧೋರಣೆ ತಾರತಮ್ಯಪೂರಿತ ಎಂಬುದಕ್ಕೂ ಕಾರಣ ಕೊಡಬೇಕಾಗಿತ್ತು. ಸಚಿವ ಸಂಪುಟದ ಈ ಅಂಶ ತಪ್ಪಿದೆ ಎಂಬುದನ್ನು ರಾಜ್ಯಪಾಲರು ಕಾರಣಸಹಿತ ಹೇಳಬೇಕಿತ್ತು. ಆದರೆ, ಈ ಕಾರ್ಯವನ್ನು ರಾಜ್ಯಪಾಲರು ಮಾಡಿಲ್ಲ'' ಎಂದು ತಿಳಿಸಿದರು.

''ರಾಜ್ಯಪಾಲರು ಸಚಿವ ಸಂಪುಟದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಮುಖ್ಯಮಂತ್ರಿಗಳ ವಿಚಾರ ಎಂಬ ಕಾರಣಕ್ಕೆ ಸಚಿವ ಸಂಪುಟದ ತೀರ್ಮಾನ ಕಡೆಗಣಿಸಬಾರದು. ಹಾಗೆ ನೋಡಿದರೆ ರಾಷ್ಟ್ರಪತಿಗಳಿಗಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವಿದೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಅಧಿಕಾರ ರಾಜ್ಯಪಾಲರಿಗೆ ಮಾತ್ರವಿದೆ. ಅವರ ವಿವೇಚನಾಧಿಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿರಬೇಕು'' ಎಂದು ಸಿಂಘ್ವಿ ವಿವರಿಸಿದರು.

''ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಮೊಟ್ಟೆ ಹಗರಣದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಅನುಮತಿ ನಿರಾಕರಿಸಿದ್ದಾರೆ. 2021ರ ದೂರಿಗೆ ಮೂರು ವರ್ಷದ ಬಳಿಕ ಅನುಮತಿ ನಿರಾಕರಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳ ವಿರುದ್ಧದ ದೂರಿಗೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಸಂವಿಧಾನ ಪರಿಚ್ಛೇದ 14 ಸಮಾನತೆಯ ಹಕ್ಕಿನ ಆಧಾರವನ್ನಾಗಿ ಪರಿಗಣಿಸಿದರೆ ಮಕ್ಕಳ ಮಧ್ಯಾಹ್ನದ ಊಟದ ಮೊಟ್ಟೆ ಹಗರಣಕ್ಕೆ ಅನುಮತಿ ನೀಡಿಲ್ಲ. ಮುಖ್ಯಮಂತ್ರಿಗಳ ಸಹಿ ಇಲ್ಲದ ಆರೋಪದಲ್ಲಿ 23 ವರ್ಷಗಳ ಹಳೆಯ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅದಕ್ಕೆ ಒಂದೂ ಕಾರಣ ನೀಡಿಲ್ಲ. ಆದರೆ, ಜೊಲ್ಲೆ ವಿರುದ್ಧ ಅನುಮತಿ ನೀಡದಿರಲು ಕಾರಣಗಳನ್ನು ವಿವರಿಸಿದ್ದಾರೆ'' ಎಂದು ಸಿಂಘ್ವಿ ತಿಳಿಸಿದರು.

ಇದನ್ನೂ ಓದಿ:ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಅರ್ಜಿ: ವಿಚಾರಣೆ ಪುನಾರಂಭ - CM Siddaramaiah Prosecution

Last Updated : Sep 12, 2024, 3:09 PM IST

ABOUT THE AUTHOR

...view details