ಬೆಂಗಳೂರು: ರಾಜಧಾನಿಯಲ್ಲಿ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ. ಉಲ್ಲಂಘನಾ ಪ್ರಕರಣಗಳು ಹೆಚ್ಚಾದಂತೆ ನಿಮ್ಮ ವಾಹನವು ಸೀಜ್ ಆಗಲಿದೆ! ಇಂಥದ್ದೊಂದು ಪ್ರಸ್ತಾವನೆಯನ್ನು ಸಾರಿಗೆಯ ಸಾರಿಗೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಸರ್ಕಾರಕ್ಕೆ ಸಲ್ಲಿಸಿದೆ. ಒಂದು ವೇಳೆ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದರೆ ಅಂತಹ ವಾಹನವನ್ನು ಸಂಚಾರ ಪೊಲೀಸರು ಜಪ್ತಿ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ವಾಹನ ಸವಾರರು ನಿರಂತರವಾಗಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಏರುಗತಿಯಲ್ಲೇ ಸಾಗುತ್ತಿವೆ. ಪೊಲೀಸರು ಸತತ ಅರಿವು ಮೂಡಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಶೇಕಡಾ 50ರಷ್ಟು ದಂಡ ವಿನಾಯಿತಿಗೆ ಎರಡು ಬಾರಿ ಅವಕಾಶ ನೀಡಿದರೂ ಹೆಚ್ಚಿನ ಪರಿಣಾಮ ಆಗಿಲ್ಲ. ಈ ನಡುವೆ ಇತ್ತೀಚೆಗೆ ಸಂಚಾರ ಪೊಲೀಸರು 50 ಸಾವಿರ ರೂ.ಗಿಂತ ಹೆಚ್ಚು ದಂಡವಿರುವ ವಾಹನಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನೂ ನಡೆಸಿದ್ದಾರೆ.
ಇದನ್ನೂ ಓದಿ:300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್ ಮಾಲೀಕನಿಗೆ ₹3.20 ಲಕ್ಷ ದಂಡ
ಇಷ್ಟಾದರೂ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿವೆ. ಹೀಗಾಗಿ, ಅಂತಹ ಅಪರಾಧಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆಯು ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿದ್ದು, ಸರ್ಕಾರವು ಒಪ್ಪಿದರೆ, ಮುಂದಿನ ದಿನಗಳಲ್ಲಿ ವಾಹನಗಳು ನಾಶವಾಗುವುದು ಗ್ಯಾರಂಟಿ.
ಹೆಚ್ಚೆಚ್ಚು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ಸದ್ಯ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಕೆಲವೊಮ್ಮೆ ದಂಡ ಪಾವತಿಸುವವರೆಗೂ ವಾಹನಗಳನ್ನು ಜಪ್ತಿ ಮಾಡಿಟ್ಟುಕೊಳ್ಳುತ್ತಾರೆ. ಇದೀಗ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿರಂತರ ಸಂಚಾರ ನಿಯಮ ಪಾಲಿಸದ ಪ್ರಕರಣಗಳಲ್ಲಿ ವಾಹನಗಳನ್ನು ನಜ್ಜುಗೊಳಿಸುವ ಅಧಿಕಾರ ನೀಡುವಂತೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಮನವಿ ಮಾಡಿದೆ.
ಇದನ್ನೂ ಓದಿ:ಟ್ರಾಫಿಕ್ ದಂಡ: ರಶೀದಿ ಬದಲು ಇ - ಚಲನ್, ಈ ವ್ಯವಸ್ಥೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ
ಬೆಂಗಳೂರು ನಗರದಲ್ಲಿ 10 ಹಾಗೂ ಇತರೆಡೆ 5 ಸಂಚಾರ ಉಲ್ಲಂಘನಾ ಪ್ರಕರಣಗಳು ದಾಖಲಾದರೆ, ಜಪ್ತಿ ಮಾಡಿ ನಾಶಗೊಳಿಸುವ ಅಧಿಕಾರ ನೀಡುವಂತೆ ಪ್ರಸ್ತಾವನೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ''ಮೋಟಾರು ಕಾಯ್ದೆ ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಿದ್ದುಪಡಿಯಾದರೆ ಕಠಿಣ ನಿಯಮ ಜಾರಿಗೆ ಬರಲಿದೆ'' ಎಂದು ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ 50 ಸಾವಿರ ರೂ.ಗಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವ 84 ಬೈಕ್ಗಳು ಹಾಗೂ ಒಂದು ಕಾರನ್ನು ಸೀಜ್ ಮಾಡಲಾಗಿತ್ತು. ಈ ವಾಹನಗಳ ಮೇಲೆ 10,210 ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದವು. ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹ ಬಾಕಿ ಇತ್ತು. ಇದಕ್ಕೂ ಮುನ್ನ ಈ ಬಗ್ಗೆ ಸವಾರನ ಮನೆ ಬಾಗಿಲಿಗೆ ನೋಟಿಸ್ ನೀಡಿ, ದಂಡ ವಸೂಲಿ ಮಾಡುವುದಾಗಿ ಎಚ್ಚರಿಸಿದ್ದ ಸಂಚಾರ ಪೊಲೀಸರು ಬಳಿಕ ಕಾರ್ಯರೂಪಕ್ಕೆ ತಂದಿದ್ದರು.
ಇದನ್ನೂ ಓದಿ:50 ಸಾವಿರಕ್ಕಿಂತ ಹೆಚ್ಚು ದಂಡವಿರುವ 80 ಬೈಕ್ ಸೀಜ್: 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪೆಂಡಿಂಗ್