ಉಡುಪಿ:"ಶಿವರಾಮ ಕಾರಂತರ ಜ್ಞಾನಪೀಠ ಶಾಶ್ವತವಾದದ್ದು. ಏನೇ ಆದರೂ ಅವರ ಪೀಠವನ್ನು ಕಸಿಯಲು ಸಾಧ್ಯವಿಲ್ಲ" ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅಭಿಪ್ರಾಯಪಟ್ಟರು.
ಖ್ಯಾತ ವಿದ್ವಾಂಸ, ವಾಗ್ಮಿ ಹಾಗು ಶಿಕ್ಷಣ ತಜ್ಞರಾದ ಪ್ರೊ.ಕೃಷ್ಣೇಗೌಡರಿಗೆ 'ಶಿವರಾಮ ಕಾರಂತ ಹುಟ್ಟೂರ' ಪ್ರಶಸ್ತಿ ನೀಡಿ ಗೌರವಿಸಿ ಅವರು ಮಾತನಾಡಿದರು.
ಉಡುಪಿಯಲ್ಲಿ ಭಾನುವಾರ ನಡೆದ 'ಶಿವರಾಮ ಕಾರಂತ ಹುಟ್ಟೂರ' ಪ್ರಶಸ್ತಿ ಸಮಾರಂಭ (ETV Bharat) ಕೋಟ ಕಾರಂತ ಥೀಮ್ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಟ್ರಸ್ಟ್ ಹಾಗು ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ನೇತೃತ್ವದಲ್ಲಿ ಭಾನುವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
"ನೀನು ಈಗ ದುಡಿದಿರುವುದು ಈ ಜನ್ಮದ ಸಾಧನೆಯಲ್ಲ, ಅದು ಜನ್ಮಜನ್ಮಾಂತರದ ಸಾಧನೆ. ಲೌಕಿಕ ಅಲೌಕಿಕ ಸಾಧನೆಗೆ ಜ್ಞಾನದ ಮಾರ್ಗವೊಂದೇ ಮಾರ್ಗ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಕೋಟದ ಜನ ಎಷ್ಟು ಪ್ರೀತಿಯಿಂದ ಕಾರಂತರನ್ನು ಸ್ವೀಕಾರಿಸಿದ್ದಾರೋ ಅಷ್ಟೇ ಪ್ರೀತಿಯಿಂದ ಕನ್ನಡ ನಾಡು, ದೇಶ ಅವರನ್ನು ಸ್ವೀಕರಿಸಿದೆ. ರಾಜ್ಯಪಾಲರೊಬ್ಬರು ಕಾರಂತರ ಕಾರ್ಯಕ್ರಮಕ್ಕಾಗಿ ಅಷ್ಟು ದೂರದಿಂದ ಬರುತ್ತಾರೆ ಎಂದರೆ ಕಾರಂತರು ದೇಶದ ಆಸ್ತಿಯಾಗಿದ್ದರಿಂದ ಮಾತ್ರ ಅದು ಸಾಧ್ಯ" ಎಂದು ಸಿ.ಎಚ್.ವಿಜಯಶಂಕರ್ ಹೇಳಿದರು.
ಬಳಿಕ ಉಡುಪಿಯ ಬಗ್ಗೆ ಮಾತನಾಡುತ್ತಾ, "ಅನ್ನದಾನದ ಮಹತ್ವವನ್ನು ಪ್ರಪಂಚಕ್ಕೆ ಸಾರಿದ್ದು ಉಡುಪಿ ಜಿಲ್ಲೆ. ಲೆಕ್ಕಾಚಾರದ ಬದುಕನ್ನು ಹೇಳಿಕೊಟ್ಟಿರುವುದು ಉಡುಪಿ, ಮಂಗಳೂರು. ಶೈಕ್ಷಣಿಕ ಉತ್ತುಂಗದಲ್ಲಿರುವ ನಾಡು ಉಡುಪಿ, ಮಂಗಳೂರು. ಆದ್ದರಿಂದ ಈ ಮಣ್ಣನ್ನು ಯೋಗ್ಯರ ನಾಡು ಎಂದು ಕರೆಯುತ್ತೇನೆ" ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಕೃಷ್ಣೇಗೌಡ, "ರಾಜಕಾರಣ ಎನ್ನುವುದು ಇಂದು ಸಭ್ಯರು ಚರ್ಚಿಸುವ ವಿಷಯವಾಗಿಲ್ಲ. ಆದರೂ ಈ ರಾಡಿಯ ನಡುವೆ ಕೆಲವು ಮಂದಿ ಸಜ್ಜನರು ಉಳಿದಿದ್ದಾರೆ. ಡಾ.ಕೆ.ಶಿವರಾಮ ಕಾರಂತರು ಕೋಟದಲ್ಲಿ ಹುಟ್ಟಿದರೂ ಸಮಾಜಶಾಸ್ತ್ರೀಯ ಸಿದ್ಧಾಂತದ ಪ್ರಕಾರ ಕಾರಂತರನ್ನು ಹುಟ್ಟಿಸಿಕೊಳ್ಳುವ ತಾಕತ್ತು ಈ ಮಣ್ಣಿಗಿತ್ತು. ಆದ್ದರಿಂದಲೇ ಅವರು ಇಲ್ಲಿ ಹುಟ್ಟಿದ್ದರು. ಸಮುದ್ರ, ಪರ್ವತ ಮತ್ತು ಬೆಟ್ಟ-ಗುಡ್ಡಗಳಿರುವ ಪ್ರದೇಶದಲ್ಲಿ ಸಾಹಸಿಗಳು ಹುಟ್ಟುತ್ತಾರೆ. ಪೃಕೃತಿಯೇ ಅವರನ್ನು ಸಾಹಸಿಗಳನ್ನಾಗಿ ಮಾಡುತ್ತದೆ. ಬೆಟ್ಟ-ಗುಡ್ಡ ಸಮುದ್ರ ಪರ್ವತಗಳಿರುವ ಈ ಕರಾವಳಿ ಪ್ರದೇಶದಲ್ಲಿ ಹುಟ್ಟಿರುವುದಕ್ಕೆ ಕಾರಂತರು ಸಾಹಸಿಗಳಾಗಿದ್ದಾರೆ. ಈ ಸಾಹಸ ಪ್ರವೃತ್ತಿ ಅವರ ಕಥೆ ಕಾದಂಬರಿಗಳಲ್ಲಿ ಕಾಣಸಿಗುತ್ತದೆ" ಎಂದರು.
ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರಿಗೆ ಗೌರವ ಸಮರ್ಪಣೆ (ETV Bharat) ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ.ಜಿಲ್ಲೆಯ ಸಾಧಕ ಗ್ರಾಮ ಪಂಚಾಯತ್ಗಳಿಗೆ ಕಾರಂತ ಪುರಸ್ಕಾರ ನೀಡಲಾಯಿತು.
ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿಕ್ಷಕ ನರೇಂದ್ರ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಭಾರತವು ಹೆಚ್ಚು ಪದಕಗಳನ್ನು ಗೆಲ್ಲುವ ದೇಶವನ್ನಾಗಿ ಮಾಡಲು ತರಬೇತಿ ನೀಡಬೇಕು : ತೃಪ್ತಿ ಮುರುಗುಂಡೆ