ಮಂಗಳೂರು: ಪ್ಯಾಲೆಸ್ತೈನ್ ಪರ ಎಡಪಕ್ಷದ ನಾಯಕರು ಮಂಗಳೂರಿನ ಕ್ಲಾಕ್ ಟವರ್ ಬಳಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿರುವ ಆರೋಪದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಿಪಿಎಂ ಮತ್ತು ಸಿಪಿಐ ಪಕ್ಷದ ಸದಸ್ಯರು ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ 11 ಮಂದಿಯ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಎಸ್ಐ ಪ್ರವೀಣ್ ಅವರ ದೂರಿನ ಮೇರೆಗೆ, ಸಿಪಿಎಂ ಮತ್ತು ಸಿಪಿಐ ಪಕ್ಷದ ಮುಖಂಡರಾದ ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾದವ ಶೆಟ್ಟಿ, ಸುಕುಮಾರ್ ರಾವ್, ಬಿ.ಕೆ. ಇಮ್ತಿಯಾಜ್, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜೆಪ್ಪಿನಮೊಗರು, ಹಯವದನ ರಾವ್ ಮತ್ತು ಸೀತಾರಾಮ ಬೇರಿಂಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪಕ್ಷದ ಮುಖಂಡರು ಪ್ರತಿಭಟನೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದರೂ, ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರಿಂದ ಅನುಮತಿ ನಿರಾಕರಿಸಲಾಗಿತ್ತು. ಧ್ವನಿವರ್ಧಕ ಬಳಕೆಗೂ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ, ಈ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?:ಮಿನಿ ವಿಧಾನಸೌಧದ ಬಳಿ ಸಿಪಿಐಎಂ ಮತ್ತು ಸಿಪಿಐ ಪಕ್ಷದ ವತಿಯಿಂದ ಪ್ಯಾಲೆಸ್ತೈನ್ನಲ್ಲಿ ಇಸ್ರೇಲ್ ನಡೆಸಿದ ನರಹತ್ಯೆಯನ್ನು ಖಂಡಿಸಿ, ಕದನ ವಿರಾಮ ನೀಡಿ ಗಾಜಾದ ಮರುನಿರ್ಮಾಣ ಹಾಗೂ ಮಾನವೀಯ ನೆರವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ನ.4ರಂದು ಪ್ರತಿಭಟನೆ ನಡೆಸಿದ್ದರು. ಸಿಪಿಐಎಂ ಮತ್ತು ಸಿಪಿಐ ಪಕ್ಷದ ಮುಖಂಡರಾದ ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾದವ ಶೆಟ್ಟಿ, ಮತ್ತು ಇತರರು ಗುಂಪು ಸೇರಿ ಕಮ್ಯುನಿಸ್ಟ್ ಪಕ್ಷದ ಬಾವುಟಗಳನ್ನು ಹಿಡಿದು "ನಾಗರಿಕ ಪ್ರತಿಭಟನೆ" ಎಂಬ ಬ್ಯಾನರ್ ಹಿಡಿದುಕೊಂಡು ಘೋಷಣೆಗಳನ್ನು ಕೂಗಿದ್ದರು.
ಆ ಸಮಯ ಸ್ಥಳದಲ್ಲಿ ಪ್ರತಿಭಟನೆ ನಡೆಸಬಾರದೆಂದು ಹಾಗೂ ಇಲಾಖೆಯಿಂದ ಪೂರ್ವನುಮತಿಯನ್ನು ನಿರಾಕರಿಸಿರುವುದಾಗಿ ತಿಳಿಸಿದರೂ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿ ಘೋಷಣೆ ಕೂಗುವುದು ಹಾಗೂ ಭಾಷಣ ಮಾಡಿದ್ದರು. ಪ್ರತಿಭಟನೆ ನಡೆಸಲು ಪೂರ್ವಾನುಮತಿ ನಿರಾಕರಿಸಿರುವುದು ತಿಳಿದಿದ್ದರೂ, ಪ್ರತಿಭಟನೆ ನಡೆಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, "ಪ್ಯಾಲೆಸ್ತೈನ್ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ನಡೆಸಿದ ಶಾಂತಿಯತ ಪ್ರತಿಭಟನೆಯ ಮೇಲೆ FIR ದಾಖಲಿಸಲಾಗಿದೆ. ಪೊಲೀಸರಿಗೆ ಪ್ರತಿಭಟನೆಯ ಮಾಹಿತಿ ನೀಡಲಾಗಿತ್ತು. ಧ್ವನಿ ವರ್ಧಕ ಬಳಸಲಾಗಿರಲಿಲ್ಲ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಖಲಿಸ್ತಾನಿಗಳ ಅಟ್ಟಹಾಸ ಖಂಡಿಸಿ ಕೆನಡಾದಲ್ಲಿ ಹಿಂದೂಗಳಿಂದ ಬೃಹತ್ ಪ್ರತಿಭಟನೆ: ಪ್ರಧಾನಿ ಮೋದಿ ಹೇಳಿದ್ದೇನು?