ಕಾರಾಗೃಹದ ಅಧೀಕ್ಷಕ ಓಬಳೇಶಪ್ಪ ಪ್ರತಿಕ್ರಿಯೆ (ETV Bharat) ಮಂಗಳೂರು:ಇಲ್ಲಿನ ಜೈಲಿನ ಆವರಣದಲ್ಲಿ ಕೈದಿಗಳು ಅಲಂಕಾರಿಕ ಮತ್ತು ಹೂವಿನ ಗಿಡಗಳನ್ನು ಬೆಳಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.
ಕಾರಾಗೃಹದ ಅಧಿಕಾರಿಗಳು ಈ ಗಿಡಗಳನ್ನು ಮಾರಾಟ ಮಾಡಲು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಕಾರಾಗೃಹದ ಮುಂಭಾಗದ ಜಾಗದಲ್ಲಿ ಸಸಿಗಳ ಮಾರಾಟ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಸಾರ್ವಜನಿಕರು ಗಿಡಗಳನ್ನು ಖರೀದಿಸಬಹುದು. ವಿವಿಧ ಬಗೆಯ ಕ್ರಾಟನ್, ಮಲ್ಲಿಗೆ, ದಾಸವಾಳ ಸೇರಿದಂತೆ 15 ಸಾವಿರ ಗಿಡಗಳು ಮಾರಾಟಕ್ಕೆ ಲಭ್ಯವಿದೆ.
30 ಕೈದಿಗಳಿಗೆ ಗಿಡ ಬೆಳೆಸುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ತರಬೇತಿ ನೀಡಲಾಗಿತ್ತು. ಮಾರಾಟ ಮಾಡಿರುವ ಸಸಿಗಳಿಂದ ಬಂದ ಆದಾಯ ಸರಕಾರದ ಖಜಾನೆ ಸೇರಲಿದೆ.
'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಕಾರಾಗೃಹದ ಅಧೀಕ್ಷಕ ಓಬಳೇಶಪ್ಪ, "ಆರೋಪ ಹೊತ್ತು ಬಂದವರು ಮತ್ತು ಆರೋಪ ಸಾಬೀತಾದವರು ಬಿಡುಗಡೆಯಾದಾಗ ಸ್ವಾವಲಂಬಿಯಾಗಿ ಬದುಕಲು ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದೇ ರೀತಿ ನಮ್ಮ ಕಾರಾಗೃಹದಲ್ಲಿ ಕೈದಿಗಳ ಮೂಲಕ ಅಲಂಕಾರಿ ಗಿಡಗಳನ್ನು ಬೆಳೆಸುವ ಕಾರ್ಯ ಪ್ರಾರಂಭಿಸಲಾಯಿತು. ಇದನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನೋಡಿ, ಮಾರಾಟ ಮಾಡುವ ಕುರಿತು ತಿಳಿಸಿದರು. ಅರಣ್ಯ ಇಲಾಖೆ, ಮ.ನ.ಪಾ.ದವರಿಗೆ ಹೇಳಿ ವ್ಯಾಪಾರ ಕೇಂದ್ರಕ್ಕೆ ಮಳಿಗೆ ತಯಾರಿಸಿಕೊಟ್ಟರು. ಇದೀಗ ಇಲಾಖೆಯಿಂದ ಅನುಮತಿ ಪಡೆದು ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ" ಎಂದರು.
ಇದನ್ನೂ ಓದಿ:ಮದುವೆಯಾಗದೇ ತಂದೆ-ತಾಯಿಯ ಪಾಲನೆ: ಬೆಳಗಾವಿ ರೈತ ಸಹೋದರಿಯರ ಸ್ವಾವಲಂಬಿ ಬದುಕು - National Sisters Day