ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ: ಎರಡು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿರುವ ಪ್ರಧಾನಿ ಮೋದಿ - Prime Minister Modi Tour

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿದ್ದಾರೆ. 16ರಂದು ಕಲಬುರಗಿಗೆ ಭೇಟಿ ಕೊಡಲಿದ್ದು, 18ರಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

By ETV Bharat Karnataka Team

Published : Mar 13, 2024, 3:43 PM IST

ಬೆಂಗಳೂರು:ಇದೇ 16ರಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಲಬುರಗಿಗೆ ಭೇಟಿ ಕೊಡಲಿದ್ದಾರೆ. ಅಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ಬಳಿಕ 18ರಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿಯೂ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್ ಕುಮಾರ್ ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೋದಿ ಅವರ ಎರಡು ದಿನಗಳ ಪ್ರವಾಸಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 16ರಂದು ಕಲಬುರಗಿಯ ಎನ್‍ವಿ ಆಟದ ಮೈದಾನದಲ್ಲಿ ಸಭೆ ನಡೆಯಲಿದೆ. 18ರಂದು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಗಣ್ಯರನೇಕರು ಬೇರೆ ಬೇರೆ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ಕೊಡಲಿದ್ದಾರೆ ಎಂದು ಹೇಳಿದರು.

ಶೀಘ್ರವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:ಚುನಾವಣೆ ಗೆಲುವಿಗೆ ಎಲ್ಲ ಪೂರ್ವಸಿದ್ಧತೆಗಳನ್ನು ಕರ್ನಾಟಕ ಬಿಜೆಪಿ ಮಾಡುತ್ತಿದೆ ಎಂದ ಸುನೀಲ್ ಕುಮಾರ್ ಅವರು, ಇವತ್ತು ರಾತ್ರಿ ಅಥವಾ ನಾಳೆ ಕರ್ನಾಟಕದ ಮೊದಲ ಹಂತದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ 28 ಲೋಕಸಭಾ ಕ್ಷೇತ್ರಗಳನ್ನು 8 ಕ್ಲಸ್ಟರ್​ಗಳನ್ನಾಗಿ ನಾವು ವಿಂಗಡಿಸಿದ್ದೇವೆ. ಸ್ಥಳೀಯ ರಾಜಕೀಯ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಕಣ್ಮುಂದೆ ಇಟ್ಟುಕೊಂಡು ಆ 8 ಕ್ಲಸ್ಟರ್​ಗಳಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮ ಮತ್ತು ತಂತ್ರಗಾರಿಕೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆ 8 ಕ್ಲಸ್ಟರ್​ಗಳಿಗೆ ರಾಷ್ಟ್ರೀಯ ನಾಯಕರ ಪ್ರವಾಸಗಳು ಮುಕ್ತಾಯವಾಗಿವೆ. ಮೈಸೂರಿಗೆ ಅಮಿತ್ ಶಾ, ಕಲಬುರಗಿಗೆ ಶಿವರಾಜ್ ಸಿಂಗ್ ಚೌಹಾಣ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೆಳಗಾವಿಗೆ, ದೇವೇಂದ್ರ ಫಡ್ನವೀಸ್ ಅವರು ಮಂಗಳೂರಿಗೆ ಬಂದಿದ್ದರು. 8 ಕ್ಲಸ್ಟರ್​ಗಳಲ್ಲೂ ಪ್ರವಾಸ ಮುಗಿದಿದೆ ಎಂದು ವಿವರ ನೀಡಿದರು.

ಕಾರ್ಯಕರ್ತರ ಸಮಾವೇಶ, ಹಿತೈಷಿಗಳ ಸಂಪರ್ಕವನ್ನು ಮಾಡಿದ್ದು, 8 ಕ್ಲಸ್ಟರ್​ಗಳಲ್ಲಿ ಚುನಾವಣಾ ಸಿದ್ಧತೆಗಳನ್ನು ಮಾಡಿದ್ದಾರೆ. ಎರಡನೇ ಹಂತದಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಮೊದಲ ಹಂತದಲ್ಲಿ ಮೋದಿಯವರು ಕರ್ನಾಟಕದಲ್ಲಿ 2 ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮಾ.18ರಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ: ಮಲೆನಾಡ ಹೆಬ್ಬಾಗಿಲಿನಿಂದಲೇ ಚುನಾವಣಾ ರಣಕಹಳೆ

ABOUT THE AUTHOR

...view details