ಬೆಂಗಳೂರು: ಬೆದರಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಹಾಸನದ ಪ್ರಸಿದ್ಧ ದೇವಾಲಯವೊಂದರ ಪೂಜಾರಿಯೊಬ್ಬರನ್ನು ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಾಸನದ ಅರಸೀಕೆರೆಯ ಪ್ರಸಿದ್ಧ ದೇವಾಲಯವೊಂದರ ಪೂಜಾರಿಯಾಗಿರುವ ದಯಾನಂದ್ (39) ಬಂಧಿತ ಆರೋಪಿ. 26 ವರ್ಷ ವಯಸ್ಸಿನ ನೊಂದ ಯುವತಿಯೊಬ್ಬರು ನೀಡಿದ್ದ ದೂರಿನನ್ವಯ ಆರೋಪಿಯ ವಿರುದ್ಧ ಬಾಗಲುಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರ ಯುವತಿಯು ಆರೋಪಿ ಪೂಜಾರಿ ಇದ್ದ ದೇವಸ್ಥಾನದ ಭಕ್ತೆಯಾಗಿದ್ದು, ಆಗಾಗ ಹೋಗಿ ಬರುತ್ತಿದ್ದಳು. ಈ ವೇಳೆ, ದೂರುದಾರಳ ಹಸ್ತರೇಖೆ ನೋಡಿದ್ದ ಆರೋಪಿ 'ನಿನಗೆ ವಿವಾಹ ಕಂಟಕವಿದೆ, ಅದರ ನಿವಾರಣೆಗಾಗಿ ಪೂಜೆ ಮಾಡುತ್ತೇನೆ' ಎಂದಿದ್ದರು. ಬಳಿಕ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ, ದೂರುದಾರಳಿಗೆ ಮಂತ್ರಿಸಿದ ನಿಂಬೆಹಣ್ಣು ನೀಡಿ 10 ಸಾವಿರ ರೂ. ಹಣ ಪಡೆದಿದ್ದ. ಮಂತ್ರಿಸಿದ ನಿಂಬೆಹಣ್ಣು ಪಡೆದ ಬಳಿಕ ಧನಾತ್ಮಕ ಬದಲಾವಣೆಗಳಾಗಿವೆ ಎಂದು ದೂರುದಾರಳು ಹೇಳಿಕೊಂಡಾಗ, 'ಮಂತ್ರಿಸಿದ ದೇವರತಾಳಿ ನೀಡುತ್ತೇನೆ' ಎಂದಿದ್ದ ಆರೋಪಿ, ಮೇ ತಿಂಗಳಿನಲ್ಲಿ ದೂರುದಾರಳನ್ನ ಹೆಚ್ಎಸ್ಆರ್ ಲೇಔಟಿನ ಆರಗ ಬಳಿ ಕರೆಸಿಕೊಂಡಿದ್ದ. ಬಳಿಕ ತಾನೇ ಪಿ.ಜಿ ಬಳಿ ಡ್ರಾಪ್ ಮಾಡುವುದಾಗಿ ಕಾರಿನಲ್ಲಿ ಕೂರಿಸಿಕೊಂಡು ಬಲವಂತವಾಗಿ ದೇವರತಾಳಿಯನ್ನ ದೂರುದಾರಳ ಕತ್ತಿಗೆ ತೊಡಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ನಂತರ ಮಾರ್ಗಮಧ್ಯದಲ್ಲಿ ಕಾರು ನಿಲ್ಲಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದಾದ ಬಳಿಕವೂ ತನ್ನ ಚಾಳಿ ಮುಂದುವರೆಸಿದ್ದ ಆರೋಪಿ, ಮಾರ್ಫ್ ಮಾಡಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಯುವತಿಯನ್ನ ಬೆದರಿಸಿ ಆಕೆಯ ಮೇಲೆ ಆಗಾಗ ಅತ್ಯಾಚಾರ ಎಸಗಿದ್ದ. ಅಲ್ಲದೇ ಹಣವನ್ನ ಸಹ ಪಡೆದುಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.