ಸಚಿವ ಬೈರತಿ ಸುರೇಶ್ ಹೇಳಿಕೆ (ETV Bharat) ಬೆಂಗಳೂರು: ಸಿಎಂ, ಡಿಸಿಎಂ ನಡುವೆ ತಂದಿಡುವ ಕೆಲಸ ಮಾಡೋದು ಬೇಡ. ಸದ್ಯಕ್ಕೆ ಈ ಎರಡೂ ಸ್ಥಾನಗಳು ಖಾಲಿ ಇಲ್ಲ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.
ಇಂದು ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಪಕ್ಷ ನಮ್ಮ ಹೈಕಮಾಂಡ್. ಹೈಕಮಾಂಡ್ ಯಾರು ಸಿಎಂ, ಯಾರು ಡಿಸಿಎಂ ಅಂತ ನಿರ್ಧಾರ ಮಾಡಲಿದೆ. ಎಐಸಿಸಿ ಇದೆ. ಸೋನಿಯಾ ಮೇಡಂ ಇದ್ದಾರೆ, ರಾಹುಲ್ ಇದ್ದಾರೆ, ಖರ್ಗೆ ಇದ್ದಾರೆ. ಅವರು ತೀರ್ಮಾನ ಮಾಡ್ತಾರೆ. ಸ್ವಾಮೀಜಿಗಳ ಅಭಿಪ್ರಾಯ ಅವರ ವೈಯಕ್ತಿಕ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ಶಾಸಕರೇ ನಮ್ಮಲ್ಲಿ ಸಿಎಂ, ಡಿಸಿಎಂ ಮಾಡೋದು ಎಂದರು.
ಕಾಂಗ್ರೆಸ್ಗೆ 136 ಸ್ಥಾನಗಳನ್ನು ಜನ ಕೊಟ್ಟಿದ್ದಾರೆ. ಡಿಕೆಶಿ ಹಾಗೂ ಸಿಎಂ ಇಬ್ಬರೂ ತುಂಬಾ ಆಪ್ತರು. ಅವರ ಮಧ್ಯೆ ಭಿನ್ನಾಭಿಪ್ರಾಯ ತರೋದು ಬೇಡ. ಇಬ್ಬರೂ ಪ್ರಬುದ್ಧರಿದ್ದಾರೆ, ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯರಿಗೆ ಆರ್.ಅಶೋಕ್ ರಾಜೀನಾಮೆ ಕೊಡಿ ಎಂದರು. ಅವರು ಯಾರು ಹೇಳೋಕೆ?. ಆರ್.ಅಶೋಕ್ ಅವರನ್ನು ಕೇಳಿ ಸಿಎಂ ಮಾಡಬೇಕಾ?. ಅವರಿಗೆ ಯಾವುದೇ ನೈತಿಕತೆ ಇಲ್ಲ. ಹುಳಿ ಹಿಂಡೋ ಕೆಲಸ ಮಾಡೋದು ಬೇಡ. ಹಿಂದೆ ಹೈಕಮಾಂಡ್ ಏನು ಹೇಳಿದೆಯೋ ಗೊತ್ತಿಲ್ಲ. ಆದರೆ ಸಿಎಂ, ಡಿಸಿಎಂ ಸ್ಥಾನ ಖಾಲಿಯಂತೂ ಇಲ್ಲ. ನಮ್ಮಲ್ಲಿ ಯಾರೂ ವಿವಾದ ಮಾಡಿಲ್ಲ. ರಾಜಣ್ಣ ಮಾತನಾಡಿದ್ದಾರೆ. ಜಾತಿವಾರು ಡಿಸಿಎಂ ಮಾಡಬೇಕು ಅನ್ನೋದನ್ನು ಹೈಕಮಾಂಡ್ ಡಿಸೈಡ್ ಮಾಡುತ್ತದೆ. ಸದ್ಯಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎಷ್ಟು ವರ್ಷ, ಏನು ಅಂತ ಇಲ್ಲ ಎಂದರು.
ಸಚಿವ ಬೈರತಿ ಸುರೇಶ್ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ದೂರಿನ ಕಾಪಿ ಇದ್ಯಾ?. ಇದ್ರೆ ಕೊಡಿ ನಾನು ಮಾತನಾಡುತ್ತೇನೆ ಅಥವಾ ಅವರು ಮಾತನಾಡಿರುವ ಕ್ಲಿಪ್ಪಿಂಗ್ ಇದ್ಯಾ?. ಅವರು ನನ್ನ ಸ್ನೇಹಿತರು. ನನ್ನ ಇಲಾಖೆಯಲ್ಲಿರುವ ಒಳ ಚರಂಡಿ, ಕುಡಿಯುವ ನೀರಿನ ನಿಗಮದ ಅಧ್ಯಕ್ಷರಾಗಿದ್ದಾರೆ. ಟೆಂಡರ್ ವಿಚಾರದಲ್ಲಿ ಮಂತ್ರಿಗಳಿಗೆ ಕೂಡ ಅಧಿಕಾರ ಇಲ್ಲ. ನಾನು ಯಾವುದೇ ಸೂಚನೆಗಳನ್ನು ಕೊಟ್ಟಿಲ್ಲ. ಬೋರ್ಡ್ಗೆ ಸೂಚನೆ ಕೊಡುವ ಅಧಿಕಾರ ನನಗೂ ಇಲ್ಲ, ಅಧ್ಯಕ್ಷರಿಗೂ ಇಲ್ಲ. ಏನೇ ಇದ್ದರೂ ಎಲ್ಲವೂ ಅಧಿಕಾರಿಗಳು ಮಾಡುತ್ತಾರೆ. ಏನಾದರೂ ತಪ್ಪುಗಳಾಗಿದ್ದರೆ ಸರಿಪಡಿಸುವ ಕೆಲಸ ಮಂತ್ರಿಯಾಗಿ ನಾನು ಮಾಡುತ್ತೇನೆ ಎಂದು ತಿಳಿಸಿದರು.
ವಿನಯ್ ಕುಲಕರ್ಣಿ ಬೆಂಬಲಿತ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಹಾಕಿದ ವಿಚಾರವಾಗಿ ಮಾತನಾಡಿ, ಯಾರು ಕಳ್ಳರು ಇರುತ್ತಾರೆ ಅವರನ್ನು ಬ್ಲಾಕ್ ಲಿಸ್ಟ್‌ಗೆ ಹಾಕುತ್ತೇವೆ, ತಪ್ಪೇನಿದೆ?. ಅದರೆ ಇಲ್ಲಿಯತನಕ ಯಾರನ್ನೂ ಬ್ಲ್ಯಾಕ್ ಲಿಸ್ಟ್‌ಗೆ ಹಾಕಿಲ್ಲ. ನೀವೇನಾದರೂ ನನ್ನ ಗಮನಕ್ಕೆ ತಂದ್ರೆ ನಾಳೆ ಬೆಳಗ್ಗೆನೇ ಬ್ಲ್ಯಾಕ್ ಲಿಸ್ಟಿಗೆ ಹಾಕ್ತೇನೆ. ಅದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಯಾರು ತಪ್ಪು ಮಾಡಿದ್ದರು ಬ್ಲಾಕ್ ಲಿಸ್ಟ್‌ಗೆ ಅಲ್ಲ ಜೈಲಿಗೆ ಕಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸಿಎಂ ನೇತೃತ್ವದಲ್ಲಿ ಸಂಧಾನ ಸಭೆ ವಿಚಾರವಾಗಿ ಮಾತನಾಡುತ್ತಾ, ಯಾವ ಸಂಧಾನನೂ ಇಲ್ಲ. ನಾವ್ಯಾರೂ ಜಗಳ ಆಡಿಲ್ಲ. ಜಗಳ ಆಡಿದ್ರೆ ತಾನೇ ಸಂಧಾನ ಆಗೋದು ಎಂದರು.
ಇದನ್ನೂ ಓದಿ:ಸಿಎಂ ಬದಲಾವಣೆ: ಸ್ವಾಮೀಜಿ ಹೇಳಿಕೆ ಹಿಂದೆ ವಿರೋಧ ಪಕ್ಷಗಳ ಕೈವಾಡ- ಚಲುವರಾಯಸ್ವಾಮಿ - N Chaluvarayaswamy