ಬೆಂಗಳೂರು: ಬಸವನಗುಡಿಯ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಸಿದ್ಧತೆ ಭರದಿಂದ ನಡೆದಿದ್ದು, ಪರಿಷೆ ಆರಂಭಕ್ಕೂ ಮುನ್ನವೇ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಬಸವನಗುಡಿಯ ದೊಡ್ಡಬಸವಣ್ಣ ಮತ್ತು ದೊಡ್ಡಗಣಪತಿ ದೇವಸ್ಥಾನದಲ್ಲಿ ನಾಳೆ(ಸೋಮವಾರ) ಮತ್ತು ಮಂಗಳವಾರ ಕಡಲೆಕಾಯಿ ಪರಿಷೆ ನಡೆಯಲಿದೆ. ಈಗಾಗಲೇ ಬುಲ್ ಟೆಂಪಲ್ ರಸ್ತೆಯ ಎಲ್ಲೆಡೆ ಮತ್ತು ಸುತ್ತಮುತ್ತ ಕಡಲೆಕಾಯಿ ವ್ಯಾಪಾರ ಆರಂಭವಾಗಿದೆ. ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ವ್ಯಾಪಾರಿಗಳು ಆಗಮಿಸಿದ್ದು, ತರಹೇವಾರಿ ಕಡಲೆಕಾಯಿಯನ್ನು ರಾಶಿ ಹಾಕಿಕೊಂಡಿದ್ದಾರೆ.
ಸೋಮವಾರ ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಆದರೆ ಭಾನುವಾರ ರಜಾದಿನ ಹಿನ್ನೆಲೆಯಲ್ಲಿ ನಗರ ನಿವಾಸಿಗಳು ಬಸವನಗುಡಿಗೆ ಭೇಟಿ ನೀಡುತ್ತಿದ್ದು, ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ದೊಡ್ಡಬಳ್ಳಾಪುರ, ಮಾಗಡಿ ಹಾಗೂ ನೆರೆಯ ತಮಿಳುನಾಡು, ಆಂಧ್ರಪ್ರದೇಶದಿಂದಲೂ ರೈತರು, ವ್ಯಾಪಾರಿಗಳು ಕಡಲೆಕಾಯಿ ಮೂಟೆಯೊಂದಿಗೆ ಆಗಮಿಸಿದ್ದಾರೆ.
ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಕಡಲೆಕಾಯಿ ವಿವಿಧ ತಳಿ ಹಾಗೂ ಹಸಿ ಕಡಲೆಕಾಯಿ ಅಲ್ಲದೆ ಹುರಿದ, ಬೇಯಿಸಿದ ಕಡಲೆಕಾಯಿ ಮಾರಾಟವಾಗುತ್ತಿದೆ. ಕೆಜಿಗೆ 80 ರಿಂದ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬರೀ ಕಡಲೆಕಾಯಿ ಅಲ್ಲದೆ, ಕಡಲೆಪುರಿ, ಬೆಂಡು-ಬತಾಸು ಸೇರಿ ಸುಮಾರು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ನಗರವಾಸಿಗಳನ್ನು ಆಕರ್ಷಿಸುತ್ತಿದೆ.
ಪರಿಷೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಡಲೆಕಾಯಿಯನ್ನು ಮನೆಗೆ ಕೊಂಡೊಯ್ಯಲು ಕಾಗದ ಹಾಗೂ ಬಟ್ಟೆ ಬ್ಯಾಗನ್ನು ಬಳಸುವಂತೆ ಕೆಲ ಎನ್ಜಿಒ ಸಂಸ್ಥೆಗಳು, ಬಿಬಿಎಂಪಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಪರಿಷೆ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ, ಪೊಲೀಸ್ ಇಲಾಖೆ, ಆರೋಗ್ಯ, ಜಲಮಂಡಳಿ, ಅಗ್ನಿಶಾಮಕ ದಳ, ಮುಜರಾಯಿ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.