ಬೆಂಗಳೂರು:78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಭದ್ರತೆಯ ಸಲುವಾಗಿ 15 ದಿನಗಳ ಮುಂಚಿತವಾಗಿಯೇ ಮೈದಾನಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ವಹಿಸಲಾಗಿದೆ. ಅಲ್ಲದೆ ನಗರದ ಎಲ್ಲಾ ಹೋಟೆಲ್ಗಳು, ಲಾಡ್ಜ್, ತಂಗುದಾಣ ಮತ್ತಿತರ ಕಡೆಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಇಂದು ಈ ಕುರಿತು ಮಾತನಾಡಿದ ಅವರು, ಆಗಸ್ಟ್ 15ರಂದು ನಡೆಯಲಿರುವ ಧ್ವಜಾರೋಹಣ, ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 10 ಜನ ಡಿಸಿಪಿ, 17 ಎಸಿಪಿ, 42 ಇನ್ಸ್ಪೆಕ್ಟರ್, 112 ಸಬ್ ಇನ್ಸ್ಪೆಕ್ಟರ್, 62 ಸಹಾಯಕ ಸಬ್ ಇನ್ಸ್ಪೆಕ್ಟರ್, 511 ಕಾನ್ಸ್ಟೇಬಲ್, 72 ಮಹಿಳಾ ಸಿಬ್ಬಂದಿ, 129 ಸಾದಾ ಉಡುಪಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, 27 ಜನ ಕ್ಯಾಮೆರಾ ಸಿಬ್ಬಂದಿಯನ್ನ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಸಂಚಾರ ವ್ಯವಸ್ಥೆ ನಿರ್ವಹಣೆಗಾಗಿ 3 ಜನ ಡಿಸಿಪಿ, 6 ಎಸಿಪಿ, 19 ಇನ್ಸ್ಪೆಕ್ಟರ್, 32 ಸಬ್ ಇನ್ಸ್ಪೆಕ್ಟರ್, 111 ಸಹಾಯಕ ಸಬ್ ಇನ್ಸ್ಪೆಕ್ಟರ್, 430 ಕಾನ್ಸ್ಟೇಬಲ್ ಸೇರಿದಂತೆ ಒಟ್ಟು 1583 ಜನ ಪೊಲೀಸ್ ಸಿಬ್ಬಂದಿ ಮೈದಾನದ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಇದಲ್ಲದೆ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್ಆರ್ಪಿ/ಸಿಎಆರ್ ತುಕಡಿಗಳು, 2 ಅಗ್ನಿಶಾಮಕ ವಾಹನಗಳು, 2 ಆ್ಯಂಬುಲೆನ್ಸ್, 4 ಖಾಲಿ ವಾಹನಗಳು, ತಲಾ 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಡಿ-ಸ್ವಾಟ್, ಗರುಡಾ ಫೋರ್ಸ್, ಆರ್.ಐ.ವಿ.ಆರ್ ನಿಯೋಜಿಸಲಾಗಿದೆ. ಹಾಗೂ ಮೈದಾನದ ಸುತ್ತಮುತ್ತಲಿನ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮೆರಾಗಳು, 4 ಬ್ಯಾಗೇಜ್ ಸ್ಕ್ಯಾನರ್ಸ್, 20 ಡಿಎಫ್ಎಂಡಿ, 40 ಹೆಚ್ಎಫ್ಎಂಡಿ ಅಳವಡಿಸಲಾಗಿದೆ.
ಮೈದಾನಕ್ಕೆ ಆಗಮಿಸುವವರು ಶಸ್ತ್ರಾಸ್ತ್ರ, ಹರಿತವಾದ ವಸ್ತು ಹಾಗೂ ಚಾಕು ಚೂರಿಗಳು, ಪಟಾಕಿ ಮತ್ತಿತರ ಸ್ಫೋಟಕಗಳು, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಕಪ್ಪು ಕರವಸ್ತ್ರಗಳು, ಬಣ್ಣದ ದ್ರಾವಣ, ತಿಂಡಿ ತಿನಿಸುಗಳು, ವೀಡಿಯೋ/ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್ ಅಥವಾ ಕ್ಯಾನ್, ಮದ್ಯ ಅಥವಾ ಮಾದಕ ಪದಾರ್ಥಗಳು, ಛತ್ರಿಗಳನ್ನ ತರುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸುವವರ ಭದ್ರತೆಯ ದೃಷ್ಟಿಯಿಂದ ಪಾಸ್ಗಳನ್ನ ವಿತರಿಸಲಾಗಿದ್ದು, ಅದರನ್ವಯ ನಿಗದಿತ ಗೇಟ್ಗಳ ಮೂಲಕವೇ ಮೈದಾನ ಪ್ರವೇಶಿಸಿ ಆಸೀನರಾಗುವಂತೆ ತಿಳಿಸಲಾಗಿದೆ.