ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವಕ್ಕೆ ಸಾಕ್ಷಿಯಾಗಿರುವ ಬೆಳಗಾವಿಯಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶ ಮತ್ತು ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ಮೊಟಕುಗೊಂಡಿದ್ದ ಕಾರ್ಯಕ್ರಮ ಮಂಗಳವಾರ (ಜ.21) ಆಯೋಜಿಸಲಾಗಿದೆ. ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಎದುರಿನಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬೆಳಗ್ಗೆ 10.30ಕ್ಕೆ ಅನಾವರಣಗೊಳಿಸಲಿದ್ದಾರೆ.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ (ETV Bharat) ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಸಚಿವರು, ಸಂಸದರು, ಶಾಸಕರು, ಸ್ವಾತಂತ್ರ್ಯ ಯೋಧರು ಹಾಗೂ ಅವರ ಕುಟುಂಬಸ್ಥರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಎಂ, ಡಿಸಿಎಂ ಬೃಹದಾಕಾರದ ಕಟೌಟ್ಗಳು (ETV Bharat) ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿತ 1924ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧೀಜಿಯವರು ಮಾಡಿದ ಭಾಷಣ ಮತ್ತು ನಿರ್ಣಯಗಳಿಂದ ಕೂಡಿದ ಕನ್ನಡ ಹಾಗೂ ಆಂಗ್ಲ ಭಾಷೆಯ "ಗಾಂಧಿ ಭಾರತ-ಮರುನಿರ್ಮಾಣ" ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಲಿದ್ದಾರೆ.
ರಾರಾಜಿಸುತ್ತಿರುವ ಬ್ಯಾನರ್ಗಳು (ETV Bharat) 25 ಅಡಿ ಎತ್ತರ ಗಾಂಧೀಜಿ ಪ್ರತಿಮೆ :ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ನಿರ್ಮಿಸಲಾದ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಾಣಕ್ಕೆ ಸುಮಾರು 20 ಟನ್ ತೂಕದ ಕಂಚು ಬಳಸಲಾಗಿದೆ. ಇದು ನೆಲಮಟ್ಟದಿಂದ ಸುಮಾರು 37 ಅಡಿ ಎತ್ತರದಲ್ಲಿದೆ. ಪೀಠದ ಎತ್ತರವೇ 12 ಅಡಿಯಿದ್ದು, ಪ್ರತಿಮೆಯು 17.40 ಅಡಿ ಅಗಲ ಮತ್ತು 14 ಅಡಿ ಉದ್ದವಿದೆ. ಒಟ್ಟು 25 ಅಡಿ ಎತ್ತರದ ಪ್ರತಿಮೆ ಇದಾಗಿದೆ. ಪೀಠದ ಸುತ್ತಲೂ ಅವರ ಸಂದೇಶಗಳನ್ನು ಬರೆಯಲಾಗಿದೆ. ಪ್ರತಿಮೆಯು ಒಟ್ಟು 4.83 ಕೋಟಿ ರೂ. ವೆಚ್ಚದಲ್ಲಿ ಪಂಚಲೋಹದಿಂದ ನಿರ್ಮಾಣಗೊಂಡಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಗಾಂಧೀಜಿಯವರ ಈ ಪ್ರತಿಮೆಯನ್ನು ನಿರ್ಮಿಸಿದ್ದು ವಿಶೇಷ.
ರಾರಾಜಿಸುತ್ತಿರುವ ಬ್ಯಾನರ್ಗಳು (ETV Bharat) ಅದ್ಧೂರಿ ವೇದಿಕೆ :ನಗರದ ಸಿಪಿಎಡ್ ಮೈದಾನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮಕ್ಕೆ ಅದ್ಧೂರಿ ವೇದಿಕೆ ಸಿದ್ಧಗೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿ 60 ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿ ಸಚಿವರು, ಶಾಸಕರು ಸೇರಿ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ.
ರಾರಾಜಿಸುತ್ತಿರುವ ಬ್ಯಾನರ್ಗಳು (ETV Bharat) ಬ್ಯಾನರ್ ಭರಾಟೆ :ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಖ್ಯ ಕಾರ್ಯಕ್ರಮದ ವೇದಿಕೆವರೆಗೂ ಬ್ಯಾನರ್ಗಳ ರಾರಾಜಿಸುತ್ತಿವೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಅವರ ಬೃಹದಾಕಾರದ ಕಟೌಟ್ಗಳು ಗಮನ ಸೆಳೆಯುತ್ತಿವೆ. ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವ ಚಕ್ರಾಕಾರಾದ ಕಟೌಟ್ಗಳು ಆಕರ್ಷಣೀಯವಾಗಿವೆ. ಎಲ್ಲೆಲ್ಲೂ ಕಾಂಗ್ರೆಸ್ ಬಾವುಟಗಳು ಕಾಣುತ್ತಿದ್ದು, ಬಹುತೇಕ ಬೆಳಗಾವಿ ಕಾಂಗ್ರೆಸ್ ಮಯವಾಗಿದೆ.
ರಾರಾಜಿಸುತ್ತಿರುವ ಬ್ಯಾನರ್ಗಳು (ETV Bharat) ಬೆಳಗಾವಿಯಲ್ಲೇ ಡಿಕೆಶಿ ಠಿಕಾಣಿ : ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲೇ ಠಿಕಾಣಿ ಹೂಡಿರುವ ಡಿ.ಕೆ.ಶಿವಕುಮಾರ್ ಸಮಾವೇಶದ ಯಶಸ್ಸಿಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಮುಖ್ಯ ವೇದಿಕೆ, ಪ್ರತಿಮೆ ಉದ್ಘಾಟನೆ ಸೇರಿ ಪ್ರತಿಯೊಂದು ಜವಾಬ್ದಾರಿಯನ್ನು ಖುದ್ದು ಡಿಕೆಶಿ ಅವರೇ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಾರ್ಯಕ್ರಮ ಯಶಸ್ಸಿಗೆ ಹಲವು ನಾಯಕರನ್ನು ಭೇಟಿಯಾಗುವುದು, ಸಭೆ ನಡೆಸುವುದು ಸೇರಿ ದಕ್ಷಿಣ ಕಾಶಿ ಕಪಿಲೇಶ್ವರ ಮಂದಿರದಲ್ಲಿ ಕ್ಷೀರಾಭಿಷೇಕ ಕೂಡ ಮಾಡಿದ್ದಾರೆ.
ಸಿಎಂ ಅಂತಿಮ ಸಿದ್ಧತೆ ಪರಿಶೀಲನೆ :ಇಂದು ಸಾಯಂಕಾಲ ಬೆಳಗಾವಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮೊದಲಿಗೆ ಗಾಂಧೀಜಿ ಪ್ರತಿಮೆ ಉದ್ಘಾಟನೆ ಆಗಲಿರುವ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಇದಾದ ಬಳಿಕ ಸಿಪಿಎಡ್ ಮೈದಾನಕ್ಕೆ ಹೋಗಿ ಮುಖ್ಯ ವೇದಿಕೆಯನ್ನು ವೀಕ್ಷಿಸಿದರು.
ಇದನ್ನೂ ಓದಿ:ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ : ಡಿಸಿಎಂ ಡಿ ಕೆ ಶಿವಕುಮಾರ್