ಹುಬ್ಬಳ್ಳಿ:ಮಳೆಗಾಲ ಆರಂಭವಾದ ಹಿನ್ನೆಲೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಾರ್ವಜನಿಕರಿಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದೆ. ವಿದ್ಯುತ್ ಅವಘಡಗಳು ಸಂಭವಿಸದಂತೆ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆಯೂ ಕೋರಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹೆಸ್ಕಾಂ, ಮಳೆಗಾಲದ ಸಂದರ್ಭದಲ್ಲಿ ಗಾಳಿ, ಮಳೆ, ಸಿಡಿಲು, ಮಿಂಚು ಬಂದಾಗ ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳಿಂದ ಹೊರಚಾಚಿಕೊಂಡಿರುವ ವಿದ್ಯುತ್ ತಂತಿಗಳು ಜನರಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳಿರುತ್ತವೆ. ಈ ಕಾರಣದಿಂದ ಸಾರ್ವಜನಿಕರು ಜಾಗೃತರಾಗಬೇಕು. ಮಳೆಗಾಲದಲ್ಲಿ ಸಿಡಿಲು, ಮಳೆ ಬರುವಾಗ ವಿದ್ಯುತ್ ತಂತಿಗಳಲ್ಲಿ ತಾಂತ್ರಿಕ ತೊಂದರೆಗಳು ಉಂಟಾದಾಗ ವಿದ್ಯುತ್ ಕಂಬ, ತಂತಿ ಮತ್ತು ಪರಿವರ್ತಕ (ಟ್ರಾನ್ಸ್‌ಫಾರ್ಮರ್)ಗಳ ಸಮೀಪ ಹೋಗಬಾರದು ಹಾಗೂ ಸಾರ್ವಜನಿಕರು ಅದನ್ನು ಸರಿಪಡಿಸಲು ಅಥವಾ ಮುಟ್ಟಬಾರದು ಎಂದು ತಿಳಿಸಿದೆ.
ವಿದ್ಯುತ್ ತಂತಿಯ ಇಕ್ಕೆಲಗಳಲ್ಲಿನ ಮರಗಳ ಕೊಂಬೆಗಳು ವಿದ್ಯುತ್ ತಂತಿಗೆ ತಾಗುವಂತಿದ್ದರೆ ಈ ಕುರಿತು ಇಲಾಖೆಗೆ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯನಿರ್ವಹಿಸುತ್ತಾರೆ. ಕೆಲವು ಖಾಸಗಿ ಜಾಗಗಳಲ್ಲಿ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದ್ದರೆ ಅವುಗಳನ್ನು ತೆರವುಗೊಳಿಸುವ ಕಾರ್ಯ ಸಾರ್ವಜನಿಕರು ಮಾಡಬಾರದು. ಇಂತಹ ಕೆಲಸ ಮಾಡುವುದಿದ್ದರೂ ಸ್ಥಳೀಯ ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ಅವರ ಉಪಸ್ಥಿತಿಯಲ್ಲಿ ಕೆಲಸ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರಿಗೆ ಸೂಚನೆಗಳು:
- ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳು, ಒದ್ದೆಯಾಗಿರುವ ವಿದ್ಯುತ್ ಕಂಬಗಳು ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು.
- ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು.
- ಬಟ್ಟೆ ಒಣಗಿಸಲು ವಿದ್ಯುತ್ ಸಾಮಗ್ರಿಗಳನ್ನು ಬಳಸಬಾರದು.
- ಸಿಡಿಲು, ಮಿಂಚು ಮಳೆ ಸಂದರ್ಭದಲ್ಲಿ ಮೇನ್ ಸ್ವಿಚ್ ಅಥವಾ ಸ್ವಿಚ್ ಬೋರ್ಡ್ ಬಳಿ ನಿಲ್ಲಬಾರದು.
- ಇಲಾಖೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತುಪಡಿಸಿ ಇತರರು ವಿದ್ಯುತ್ ಕಂಬಗಳನ್ನು ಹತ್ತುವುದು, ದುರಸ್ತಿ ಕಾರ್ಯ ಮಾಡುವುದು ಅಪಾಯಕಾರಿ ಹಾಗೂ ಕಾನೂನಿನ ಪ್ರಕಾರ ನಿಷೇಧ.
- ವಿದ್ಯುತ್ ಉಪಕರಣಗಳನ್ನು ಪರಿಣಿತರಿಂದ ದುರಸ್ತಿಗೊಳಿಸಬೇಕು.
- ವಿದ್ಯುತ್ ಸ್ವಿಚ್ ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು.
- ವಿದ್ಯುತ್ ತಂತಿಗಳ ಕೆಳಗೆ ಆಟ ಆಡಬಾರದು.
- ಟ್ರಾನ್ಸ್ಫಾರ್ಮರ್ಗಳ ಸುತ್ತಲಿನ ತಂತಿ ಬೇಲಿ ಮುಟ್ಟಬಾರದು.
- ಹೊಲ ಮತ್ತು ತೋಟದ ಮನೆಗಳ ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬಾರದು.
- ರಸ್ತೆಗಳಲ್ಲಿ ನಡೆದಾಡುವಾಗ ವಿದ್ಯುತ್ ಕಂಬಗಳಿಂದ ದೂರವಿರಬೇಕು
- ವಾಹನಗಳನ್ನು ರಸ್ತೆಗಳ ಪಕ್ಕದಲ್ಲಿರುವ ವಿದ್ಯುತ್ ಕಂಬದ ಸನಿಹ ಅಥವಾ ಅವುಗಳ ಅರ್ಥಿಂಗ್ ವೈಯರ್/ಗೈ ವೈಯರ್ ಹತ್ತಿರ ವಾಹನ ನಿಲುಗಡೆ ತಪ್ಪಿಸಬೇಕು.