ಬೆಂಗಳೂರು: ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಡಾಜೆ ಮೊಹಮ್ಮದ್ ಷರೀಫ್ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಲುಕ್‌ಔಟ್ ನೋಟಿಸ್ ಜಾರಿಯಾಗಿದ್ದ ಆರೋಪಿ ಬಹ್ರೇನ್‌ನಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಪಿಎಫ್‌ಐ ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿದ್ದ ಆರೋಪಿ, ಸಂಘಟನೆಯ ಬಾಹ್ಯ ಸೇವಾ ತಂಡದ ಮುಖ್ಯಸ್ಥನಾಗಿದ್ದ. ಪ್ರಕರಣದ ಇತರ ಆರೋಪಿಗಳು ಸೇರಿ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಪಿಎಫ್ಐನ ಬಾಹ್ಯ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದರು. ಪಿಎಫ್‌ಐನ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಪ್ರವೀಣ್ ನೆಟ್ಟಾರು ಹತ್ಯೆಯ ಆದೇಶ ನೀಡುವ ಜವಾಬ್ದಾರಿಯನ್ನು ಮೊಹಮ್ಮದ್ ಷರೀಫ್ ವಹಿಸಿದ್ದ. ಮತ್ತು ಆತನ ಸೂಚನೆಯ ಮೇರೆಗೆ ಆರೋಪಿ ಮುಸ್ತಫಾ ಪೈಚಾರ್ ಮತ್ತು ಆತನ ತಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆಗೈದಿತ್ತು ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಮತ್ತು ಸದಸ್ಯರು ಹತ್ಯೆಗೈದಿದ್ದರು. ಪ್ರಕರಣದ ಗಂಭೀರತೆ ಅರಿತ ಎನ್ಐಎ ಆಗಸ್ಟ್ 4ರಂದು ತನಿಖೆ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಇದುವರೆಗೆ ತಲೆಮರೆಸಿಕೊಂಡಿರುವ ಮೂವರು ಹಾಗೂ ಬಂಧಿತ 20 ಆರೋಪಿಗಳ ಸಹಿತ 23 ಜನ ಆರೋಪಿತರ ವಿರುದ್ಧ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ರಾಜ್ಯದ 16 ಕಡೆಗಳಲ್ಲಿ ಎನ್ಐಎ ದಾಳಿ