ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಅಗತ್ಯವಿಲ್ಲ, ಅವಶ್ಯಕತೆ ಇರುವವರಿಗೆ ಕೊಡಬೇಕಿತ್ತು ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಬಜೆಟ್ ಪುಸ್ತಕದಲ್ಲಿ ಅನುದಾನ ವಿಚಾರದಲ್ಲಿ ಕೇಂದ್ರವನ್ನು ಟೀಕಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ ತಿರುಗೇಟು ನೀಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನು ಕೇಂದ್ರವನ್ನು ಕೇಳಿ ಮಾಡಿಲ್ಲ, ಈಗ ತಮಗೆ ಆಗುತ್ತಿರುವ ಆರ್ಥಿಕ ಭಾರಕ್ಕೆ ಕೇಂದ್ರದ ಕಡೆ ಬೆರಳು ತೋರುತ್ತಿದ್ದಾರೆ. ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ, ಉಚಿತ ಅಕ್ಕಿ ಎಲ್ಲರಿಗೂ ಅಗತ್ಯವಿಲ್ಲ, ಅಗತ್ಯ ಇರುವವರಿಗೆ ನಿಜಕ್ಕೂ ಬೇಕು. ಅದೇ ರೀತಿ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಎರಡು ಸಾವಿರ ಹಣ ಎಲ್ಲರಿಗೂ ಬೇಡ. ಆದರೆ ಅವಶ್ಯಕತೆ ಇರುವವರಿಗೆ ಬೇಕು. ಹಾಗಾಗಿ ಯಾರಿಗೆ ಅಗತ್ಯವಿದೆಯೋ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕಿತ್ತು. ಆದರೆ ಸರ್ಕಾರ ಎಲ್ಲರಿಗೂ ನೀಡಿದೆ ಎಂದರು.
ಅಕ್ಕಿ ಯಾರು ಕೊಡುತ್ತಾರೆ ಎಂದು ಜನರಿಗೆ ಗೊತ್ತಿರಲಿಲ್ಲ. ಇವರು ಬಂದ ನಂತರವೇ ಕೇಂದ್ರ ಉಚಿತ ಅಕ್ಕಿ ಕೊಡುತ್ತಿದೆ ಎನ್ನುವುದು ಜನರಿಗೆ ಗೊತ್ತಾಯಿತು. 10 ಕೆಜಿ ಉಚಿತ ಅಕ್ಕಿ ಎಂದು ಹೇಳಿ ನಂತರ ಕೇಂದ್ರದ ಐದು ಕೆಜಿ ಜೊತೆ ನಮ್ಮದು ಐದು ಕೆಜಿ ಎಂದರು. ಆದರೆ ಆ ಐದು ಕೆಜಿ ಕೊಡಲೂ ಆಗಿಲ್ಲ ಎಂದು ಟೀಕಿಸಿದರು.
ಮಾತೆತ್ತಿದರೆ ಕೇಂದ್ರ ಅನುದಾನ ಕೊಡಲಿಲ್ಲ, ಕೇಂದ್ರ ಹಣ ಕೊಡಲಿಲ್ಲ ಎನ್ನುತ್ತಾರೆ. 15ನೇ ಹಣಕಾಸು ಆಯೋಗ ಆದಾಗ ರಾಜ್ಯದಲ್ಲಿ ಇದ್ದದ್ದು, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಆಗ ಯಾಕೆ ನೀವು ಕೇಳಲಿಲ್ಲ. ಈಗ ಸಚಿವರಾದವರೇ ಐದಾರು ಪ್ರಬಲ ನಾಯಕರೇ ಅಂದೂ ಸಚಿವರಾಗಿದ್ದರು, ಅವರು ಯಾಕೆ ಮಾತನಾಡಿಲ್ಲ, ಹಣಕಾಸು ಆಯೋಗದ ಮಧ್ಯಂತರ ವರದಿಯನ್ನ ಮೊದಲ ವರದಿ ಎನ್ನುತ್ತಾರೆ. ಆದರೆ ಮೊದಲ ವರದಿ ಎನ್ನುವುದೇ ಇರಲ್ಲ, ಮಧ್ಯಂತರ ವರದಿಯಲ್ಲಿ ಅಭಿಪ್ರಾಯ ಇರಲಿದೆ. ಅಂತಿಮ ವರದಿಯಲ್ಲಿ ಅನುದಾನ ಶಿಫಾರಸು ಮಾಡಲಾಗಿರುತ್ತದೆ. ಇವರು ಮಧ್ಯಂತರ ವರದಿ ಉಲ್ಲೇಖಿಸಿ ಕೇಂದ್ರದಿಂದ ಅನ್ಯಾಯ ಎನ್ನುವ ಆರೋಪ ಮಾಡುತ್ತಾರೆ ಎಂದು ಚಾಟಿ ಬೀಸಿದರು.
ಭದ್ರಾ ಮೇಲ್ದಂಡೆ ಅನುದಾದ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಸಚಿವ ಶಿವಾನಂದ ಪಾಟೀಲ್ ಪಾಯಿಂಟ್ ಆಫ್ ಆರ್ಡರ್ ಎತ್ತಿದರು, ಈ ಹಿಂದೆ ಬೊಮ್ಮಾಯಿ ಅವರು ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಅನುದಾನದ ಕುರಿತು ಪ್ರಸ್ತಾಪಿಸಿದ್ದರು ಕೇಂದ್ರದಿಂದ ಅನುದಾನ ತರುವುದಾಗಿಯೂ ಹೇಳಿದ್ದರು. ಆದರೆ ಜಾರಿ ಮಾಡಿಲ್ಲವಲ್ಲ ಎಂದು ಪ್ರಸ್ತಾಪಿಸಿದರು ಇದಕ್ಕೆ ಸಚಿವ ಎಂಬಿ ಪಾಟೀಲ್ ಸಹಮತ ವ್ಯಕ್ತಪಡಿಸಿದರು. ಆದರೆ ಇದು ಪಾಯಿಂಟ್ ಆಫ್ ಆರ್ಡರ್ ವ್ಯಾಪ್ತಿಗೆ ಬರಲ್ಲ ಇದನ್ನು ನಂತರ ನೋಡೋಣ ಎನ್ನುತ್ತಾ ಉಪಸಭಾಪತಿ ಪ್ರಾಣೇಶ್ ಬಜೆಟ್ ಭಾಷಣ ಮುಂದುವರೆಸಲು ಸೂಚಿಸಿದರು.