ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಯುವತಿ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು: ಪ್ರಲ್ಹಾದ್​ ಜೋಶಿ ಆಗ್ರಹ - Pralhad Joshi - PRALHAD JOSHI

ರಾಜ್ಯ ಸರ್ಕಾರದ ತುಷ್ಟೀರಣ ನೀತಿ ಕಾರಣದಿಂದ ರಾಜ್ಯದಲ್ಲಿ ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಟೀಕಿಸಿದ್ದಾರೆ.

ಹುಬ್ಬಳ್ಳಿ ಕಾಲೇಜು‌ ಕ್ಯಾಂಪಸ್​ನಲ್ಲಿ ಯುವತಿಯ ಕೊಲೆ ಪ್ರಕರಣ ಸಮಗ್ರ ತನಿಖೆಯಾಗಬೇಕು: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ ಕಾಲೇಜು‌ ಕ್ಯಾಂಪಸ್​ನಲ್ಲಿ ಯುವತಿಯ ಕೊಲೆ ಪ್ರಕರಣ ಸಮಗ್ರ ತನಿಖೆಯಾಗಬೇಕು: ಪ್ರಹ್ಲಾದ್ ಜೋಶಿ

By ETV Bharat Karnataka Team

Published : Apr 19, 2024, 11:33 AM IST

Updated : Apr 19, 2024, 4:33 PM IST

ಪ್ರಲ್ಹಾದ್​ ಜೋಶಿ ಆಗ್ರಹ

ಹುಬ್ಬಳ್ಳಿ:ನಗರದಲ್ಲಿ ಅಮಾನವೀಯ ಘಟನೆ ನಡೆದಿದೆ. ಕಾರ್ಪೊರೇಟರ್ ಮಗಳಾದ ನೇಹಾ ಹಿರೇಮಠ ಎಂಬ ಯುವತಿಯ ಬರ್ಬರ ಹತ್ಯೆಯಾಗಿದೆ.
ಇದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥಿತ ಹದೆಗಟ್ಟಿದೆ ಎಂಬುದು ಗೊತ್ತಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು. ಕಿಮ್ಸ್‌ನ ಶವಾಗಾರಕ್ಕೆ ಭೇಟಿ ನೀಡಿ ಮೃತಳ ತಂದೆಯಿಂದ ಮಾಹಿತಿ ಪಡೆದ ಬಳಿ ಅವರು ಮಾತನಾಡಿದರು.

ಸರ್ಕಾರದ ತುಷ್ಟೀರಣ ನೀತಿ ಕಾರಣದಿಂದ ರಾಜ್ಯದಲ್ಲಿ ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ. ಇಂತಹ ಘಟನೆಗಳನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಾನು ಮೃತ ಯುವತಿ ತಂದೆ, ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರೊಂದಿಗೆ ಮಾತನಾಡಿದ್ದೇನೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಮಾಯಕ ಹೆಣ್ಣು ಮಗಳ ಕೊಲೆಯಾಗಿದೆ. ಈ ಕುರಿತು ರಾಜ್ಯದ ಗೃಹ ಸಚಿವರ ಜಿ.ಪರಮೇಶ್ವರ್​ ಅವರು ಏನು ಉತ್ತರ ಕೊಡುತ್ತಾರೆ? ಎಂದು ಪ್ರಶ್ನಿಸಿದರು.

ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ಕಠಿಣ ಶಿಕ್ಷೆ ವಿಧಿಸಬೇಕು. ಯಾರು ವಕೀಲರು ಕೂಡ ಆರೋಪಿ ಪರ ವಕಾಲತ್ತು ವಹಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.

ಹುಬ್ಬಳ್ಳಿ ಕೊಲೆ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ನೀಡಬೇಕು - ಬೊಮ್ಮಾಯಿ: ಮತ್ತೊಂದೆಡೆ, ಕಿಮ್ಸ್‌ಗೆ ಭೇಟಿ ನೀಡಿದ ಬಳಿಕ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಮಾತನಾಡಿ, ಹುಬ್ಬಳಿಯ ಯುವತಿಯ ಕೊಲೆ ಅತ್ಯಂತ ದುಃಖಕರ ಮತ್ತು ಆಘಾತಕಾರಿ ಘಟನೆಯಾಗಿದೆ. ನಾವು ಯಾರು ಇದನ್ನು ಊಹಿಸಿರಲಿಲ್ಲ. ಕಾಲೇಜು ಕ್ಯಾಂಪಸ್‌ನಲ್ಲಿ, ಅದೂ ಹಾಡಹಗಲೇ ಇಂತಹ ಘಟನೆ ಹುಬ್ಬಳ್ಳಿಯಲ್ಲಿ ಈ ಹಿಂದೆ ಎಂದೂ ನಡೆದಿರಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಗದಗ್​ನಲ್ಲಿ ನಿನ್ನೆ ಮರ್ಡರ್ ಆಗಿದೆ. ಬೆಂಗಳೂರಿನಲ್ಲಿಯೂ ನಿನ್ನೆ ಮರ್ಡರ್ ಆಗಿದೆ. ಹಲವಾರು ತಿಂಗಳಿನಿಂದ ಇಂಥ ಘಟನೆಗಳು ನಡೆಯುತ್ತಿವೆ. ರೌಡಿಗಳಿಗೆ ಪೊಲೀಸರ ಹೆದರಿಕೆ ಇಲ್ಲದಂತಾಗಿದೆ ಎಂದರು.

ಈ ಪ್ರಕರಣದಲ್ಲಿ ಆ ಮಗುವಿನ ತಪ್ಪಿಲ್ಲ, ತಮ್ಮ ಮಕ್ಕಳು ಎಷ್ಟು ಸುರಕ್ಷತವಾಗಿದ್ದಾರೆ ಎಂಬ ಆತಂಕ ಈಗ ಪಾಲಕರಿಗೆ ಕಾಡುತ್ತಿದೆ. ಸಿಎಂ ಒಂದು ಟ್ವೀಟ್ ಮಾಡಿದರೆ ಮಾತ್ರಕ್ಕೆ ಜವಾಬ್ದಾರಿ ಮುಗಿದಂತಲ್ಲ. ಈ ಪ್ರಕರಣ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿಬೇಕು. ಆದರೆ ಇಲ್ಲಿಯ ಪೊಲೀಸರಿಂದ ಅದು ಆಗೋದಿಲ್ಲ. ಇದಕ್ಕಾಗಿ ಒಂದು ಎಸ್​ಐಟಿ ತಂಡ ರಚನೆ ಮಾಡಬೇಕು. ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ನೀಡಬಾರದು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಹುಬ್ಬಳ್ಳಿ ಕಾಲೇಜು‌ ಕ್ಯಾಂಪಸ್​ನಲ್ಲಿ ಯುವತಿಯ ಕೊಲೆ: ಪೊಲೀಸ್ ಕಮೀಷನರ್ ಹೇಳಿದ್ದೇನು? - College Girl Murder

Last Updated : Apr 19, 2024, 4:33 PM IST

ABOUT THE AUTHOR

...view details