ಹಾಸನ: ಪದೇ ಪದೆ ದೇವೇಗೌಡರ ಸಾವಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣನ ಮಾತಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ತಕ್ಕ ಉತ್ತರ ಕೊಡಲಿದೆ. ಜೂನ್ 4ರಂದು ಹೊರಬರಲಿರುವ ಫಲಿತಾಂಶವೇ ರಾಜಣ್ಣನ ಮಾತಿಗೆ ತಿರುಗೇಟು ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಜೊತೆಗಿನ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಮುಂದಿನ ದಿನಗಳಲ್ಲಿ ನಮ್ಮ ಜೊತೆ ಪ್ರಚಾರದಲ್ಲಿ ಒಗ್ಗಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ತುರ್ತು ಸಮನ್ವಯ ಸಭೆಗೆ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ಹಾಸನಕ್ಕೆ ಬಂದಿದ್ದಾರೆ. ಬಿಜೆಪಿ ಮುಖಂಡರು ಶಾಸಕರನ್ನು ಕರೆದು ಸಭೆ ನಡೆಸಿದ್ದು, ಒಂದೊಂದೇ ತಾಲೂಕಿನ ಬಗ್ಗೆ ಮಾಹಿತಿಯ ಕಲೆಹಾಕಿ, ಎಲ್ಲಾ ಮುಖಂಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟನ್ನು ಮೂಡಿಸಿದ್ದಾರೆ ಎಂದು ತಿಳಿಸಿದರು.
ನಮ್ಮ ಮುಖ್ಯ ಗುರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಬೇಕು. 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಅದರಲ್ಲೂ ಹಾಸನದ ಎನ್.ಡಿ.ಎ ಅಭ್ಯರ್ಥಿಯಾದ ನಿಮ್ಮನ್ನು ದೆಹಲಿಗೆ ತೆಗೆದುಕೊಂಡು ಹೋಗಬೇಕು ಎಂದು ಸಭೆ ಮಾಡಿದ್ದಾರೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋಗುವ ನಿರ್ಧಾರ ಮಾಡಿದ್ದೇವೆ ಎಂದು ಪ್ರಜ್ವಲ್ ತಿಳಿಸಿದರು.