ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಮನೆ ದೇವರು, ಲಕ್ಷ್ಮಿನರಸಿಂಹ ಮತ್ತು ಹರದನಹಳ್ಳಿಯ ಈಶ್ವರ ಮತ್ತು ಮಾವಿನಕೆರೆಯ ರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಾಸನಕ್ಕೆ ಆಗಮಿಸಿದ ಪ್ರಜ್ವಲ್ ರೇವಣ್ಣ 11 ಗಂಟೆ ವೇಳೆಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರುಗಳಾದ ಸಿಮೆಂಟ್ ಮಂಜು, ಹೆಚ್.ಕೆ ಸುರೇಶ್, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಉಪಾಸಭಾಪತಿ ಪ್ರಾಣೇಶ್, ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ಅವರಿಗೆ ಪ್ರಜ್ವಲ್ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆಗಮಿಸಿ ಸೂಚಕರಾಗಿ ಸಹಿ ಹಾಕಿದರು. ಇದಕ್ಕೂ ಮೊದಲು ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಮಾಜಿ ಸಿಎಂ ಡಿ.ವಿ. ಸದಾನಂಗೌಡ ಕೂಡಾ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ಇದನ್ನೂ ಓದಿ:ಗಡಿ ಜಿಲ್ಲೆಯಲ್ಲಿ ಬಿಸಿಲಿನಿಂದ ಜನರು ಹೈರಾಣ: ಹವಾಮಾನ ಇಲಾಖೆಯಿಂದ ತಾಪಮಾನ ಏರಿಕೆ ಎಚ್ಚರಿಕೆ - Rising Temperature
ಮುನಿಸು ಮುರಿಯದ ಪ್ರೀತಂಗೌಡ: ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗಮಿಸಿದರೂ, ಮಾಜಿ ಶಾಸಕ ಪ್ರೀತಂಗೌಡ ಗೈರಾಗಿದ್ದರು. ನಿನ್ನೆ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಸಂಧಾನ ಸಭೆ ನಡೆಸಿದರೂ ಮಾಜಿ ಶಾಸಕರು ಮುನಿಸು ಮುರಿಯಲಿಲ್ಲ. ತನ್ನ ಮನೆಗೆ ಕಲ್ಲು ತೂರಿದ ಕುಟುಂಬದ ಜತೆ ಮೈತ್ರಿ ಮಾಡಿಕೊಂಡರೆ ನಾನೇಕೆ ಹೋಗಬೇಕು ಎನ್ನುವ ತಮ್ಮ ದಿಟ್ಟ ನಿರ್ಧಾರವನ್ನು ಬದಲಾಯಿಸದೇ, ಬಿ.ವೈ. ವಿಜಯೇಂದ್ರ ಆಗಮಿಸಿದರೂ ನಾಮಪತ್ರ ಸಲ್ಲಿಕೆಗೆ ಬರಲಿಲ್ಲ. ಆದರೆ ಬಿಜೆಪಿ ಮೂಲಗಳ ಪ್ರಕಾರ ಪ್ರೀತಂ ಸ್ಟಾರ್ ಪ್ರಚಾರಕರಾಗಿರುವ ಹಿನ್ನೆಲೆ ಚಿತ್ರದುರ್ಗದಲ್ಲಿ ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರಾಮನಗರ: ಮಡದಿ ಜೊತೆ ಬಂದು ನಾಮಪತ್ರ ಸಲ್ಲಿಸಿದ ಡಾ. ಸಿ.ಎನ್. ಮಂಜುನಾಥ್ - DR MANJUNATH NOMINATION