ದೆಹಲಿ/ಹುಬ್ಬಳ್ಳಿ:ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವನರೇಂದ್ರ ಮೋದಿ ಅವರ ಸಂಪುಟದಲ್ಲಿ ಪ್ರಲ್ಹಾದ್ ಜೋಶಿ ಅವರಿಗೂ ಸಂಪುಟ ದರ್ಜೆಯ ಸ್ಥಾನ ಸಿಗುವುದು ಖಚಿತವಾಗಿದೆ. ಅಂತೆಯೇ ಜೋಶಿ ಅವರು ಇಂದು ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಎನ್ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪ್ರಲ್ಹಾದ್ ಜೋಶಿ ಅವರು ಇಂದು ಸಂಜೆ 7:15ಕ್ಕೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದ್ದ ಜೋಶಿ ಅವರಿಗೆ ಈಗ ಮತ್ತೆ ಕೇಂದ್ರ ಕ್ಯಾಬಿನೆಟ್ನಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಸಿಹಿ ತಿನ್ನಿಸಿ ಬೆನ್ನುತಟ್ಟಿದ ಬಿಎಸ್ವೈ:ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಎಸ್ವೈ ಅವರನ್ನು ಭೇಟಿಯಾಗಿ ಜೋಶಿ ಆಶೀರ್ವಾದ ಪಡೆದರು. ಈ ವೇಳೆ ಜೋಶಿ ಅವರಿಗೆ ಯಡಿಯೂರಪ್ಪ ಅವರು ಸಿಹಿ ತಿನ್ನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.
ಸಂಸದರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.