ಬೆಂಗಳೂರು : ಮುಸ್ಲಿಂ ಸಮುದಾಯದ ದಂಪತಿಗಳಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆ ಮಾಡುವ ಅಧಿಕಾರವನ್ನು ವಕ್ಫ್ ಮಂಡಳಿಗೆ ವಹಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಇಂದಿರಾ ನಗರದ ನಿವಾಸಿ ಎ. ಆಲಂಪಾಷ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ನ್ಯಾಯಪೀಠ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮತ್ತು ವಕ್ಫ್ ಮಂಡಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮುಸ್ಲಿಂ ಸಮುದಾಯದ ದಂಪತಿಗಳಿಗೆ ವಿವಾಹ ನೋಂದಣಿ ಮಾಡುವ ಅಧಿಕಾರವನ್ನು ವಕ್ಫ್ ಮಂಡಳಿಗೆ ವಹಿಸಿ 2023ರ ಆಗಸ್ಟ್ 3 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ಕೆಲ ಷರತ್ತುಗಳೊಂದಿಗೆ ಮುಸ್ಲಿಂ ದಂಪತಿಗಳಿಗೆ ವಿವಾಹ ನೋಂದಣಿ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ರೀತಿಯಲ್ಲಿ ವಿವಾಹ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುವುದಕ್ಕೆ ವಕ್ಫ್ ಕಾಯ್ದೆ ಅಡಿಯಲ್ಲಿ ಅಧಿಕಾರ ಹೊಂದಿಲ್ಲ.
ವಕ್ಫ್ ಕಾಯ್ದೆ-1995ರ ಅನ್ವಯ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವುದು ವಕ್ಫ್ ಮಂಡಳಿ ಕಾರ್ಯವ್ಯಾಪ್ತಿ ಆಗಿದೆ. ಕರ್ನಾಟಕ ವಿವಾಹ ನೋಂದಣಿ ಕಾಯ್ದೆ-1976ರ ಪ್ರಕಾರ ವಿವಾಹ ನೋಂದಣಿ ಅಧಿಕಾರ ಇರುವುದು ಉಪ ನೋಂದಣಾಧಿಕಾರಿಗೆ. ಮುಸ್ಲಿಮರಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಸಂಬಂಧ 2009ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ 2011ರಲ್ಲಿ ರದ್ದುಪಡಿಸಿದೆ. ಇದಾದ ಬಳಿಕ ಸರ್ಕಾರ ಪರಿಷ್ಕೃತ ಆದೇಶಗಳನ್ನು ಹೊರಡಿಸಿದೆ. ಈಗಾಗಲೇ ಉಪ ನೋಂದಣಾಧಿಕಾರಿಗಳ ಬಳಿ ವಿವಾಹ ನೋಂದಣಿಗೆ ಅವಕಾಶವಿದೆ. ಅಲ್ಲದೇ ಸ್ಥಳೀಯ ಖಾಜಿಗಳ ಬಳಿಯೂ ವಿವಾಹ ದಾಖಲೆ ಇರಲಿದೆ. ಆದಾಗ್ಯೂ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡುವ ಮೂಲಕ ಮೂರನೇ ವ್ಯವಸ್ಥೆಯೊಂದನ್ನು ಹುಟ್ಟು ಹಾಕಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ, ಈ ಆದೇಶ ಸಂವಿಧಾನದ ಪರಿಚ್ಛೇದ 14ಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಈ ಅಸಮಂಜಸವಾದ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ದಾಖಲೆಗಳಲ್ಲಿ ಹೆಸರು ಬದಲಾಯಿಸಿ ಮತ್ತೊಬ್ಬರ ಹೆಸರಿದ್ದ ತಕ್ಷಣ ಆಸ್ತಿ ಮಾಲೀಕತ್ವ ಬದಲಾಗದು: ಹೈಕೋರ್ಟ್ - High Court