ಕರ್ನಾಟಕ

karnataka

ETV Bharat / state

ಶಿವಮೊಗ್ಗದ ನಿವೃತ್ತ ಪೊಲೀಸ್ ನಟನೆಯ 'ಪವರ್ ಆಫ್ ವೋಟ್' ಕಿರುಚಿತ್ರಕ್ಕೆ ಪ್ರಥಮ ಬಹುಮಾನ - Voting Awareness - VOTING AWARENESS

ಮತದಾನ ಜಾಗೃತಿ ಕುರಿತು ರಾಜ್ಯ ಚುನಾವಣಾ ಆಯೋಗ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಶಿವಮೊಗ್ಗದ ನಿವೃತ್ತ ಪೊಲೀಸ್ ಅಧಿಕಾರಿ ದಾನಂ ಬಾಬು ನಟನೆಯ 'ಪವರ್ ಆಫ್ ವೋಟ್​' ಪ್ರಥಮ ಬಹುಮಾನ ಪಡೆದಿದೆ.

power-of-voting-first-prize-for-a-short-film-starring-retired-policeman-in-shivamogga
ಶಿವಮೊಗ್ಗದ ನಿವೃತ್ತ ಪೊಲೀಸ್ ನಟನೆಯ 'ಪವರ್ ಆಫ್ ವೋಟ್' ಕಿರುಚಿತ್ರಕ್ಕೆ ಪ್ರಥಮ ಬಹುಮಾನ

By ETV Bharat Karnataka Team

Published : Apr 11, 2024, 9:26 PM IST

Updated : Apr 11, 2024, 9:40 PM IST

ಮತದಾನದ ಅರಿವು

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಅತಿ ಮುಖ್ಯ. ಹೀಗಾಗಿ ಚುನಾವಣೆಯನ್ನು ಹಬ್ಬದಂತೆ ಚುನಾವಣಾ ಆಯೋಗ ನಡೆಸುತ್ತಿದೆ. ಪ್ರತಿ ವರ್ಷಕೊಮ್ಮೆ ಮತದಾರನಿಗೆ ಸಿಗುವ ಅವಕಾಶವನ್ನು ಯಾವ ಆಮಿಷಗಳಿಗೂ ಮಾರಿಕೊಳ್ಳಬಾರದು ಎಂದು ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಈ ಕುರಿತ ಕಿರುಚಿತ್ರ ಸ್ಪರ್ಧೆಯಲ್ಲಿ ಶಿವಮೊಗ್ಗದ ನಿವೃತ್ತ ಪೊಲೀಸ್ ಅಧಿಕಾರಿ ದಾನಂ ಬಾಬು ನಟನೆಯ 'ಪವರ್ ಆಫ್ ವೋಟ್​' ಕಿರುಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮತದಾನದ ಅರಿವು ಮಾಡಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಕಿರುಚಿತ್ರಗಳನ್ನು ಆಹ್ವಾನಿಸಿತ್ತು‌. ಈ ಕಿರುಚಿತ್ರ ಕೇವಲ ಎರಡು‌‌ ನಿಮಿಷದಲ್ಲಿ ಸಂದೇಶ ಸಾರುವಂತಾಗಬೇಕಿತ್ತು. 280 ಕಿರುಚಿತ್ರಗಳ ಪೈಕಿ 'ಪವರ್ ಆಫ್ ವೋಟ್​' ಮೊದಲ ಬಹುಮಾನಕ್ಕೆ ಪಾತ್ರವಾಗಿದೆ. ತಂಡಕ್ಕೆ ಶೀಘ್ರದಲ್ಲೇ ಆಯೋಗ ಪ್ರಶಸ್ತಿ ಫಲಕ ಹಾಗೂ 20 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಿದೆ.

ರಾಜ್ಯ ಚುನಾವಣಾ ಆಯೋಗದ ಪ್ರಕಟಿಸಿದ ಕಿರುಚಿತ್ರ ಸ್ಪರ್ಧೆಯ ವಿಜೇತರು

ಪ್ರಶಸ್ತಿ ಬಂದಿರುವ ಬಗ್ಗೆ ದಾನಂ ಬಾಬು ಮಾಹಿತಿ ನೀಡಿದ್ದಾರೆ. ''ರಾಜ್ಯ ಚುನಾವಣಾ ಆಯೋಗವು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರಗಳಿಗೆ ಆಹ್ವಾನಿಸಿತ್ತು.‌ ಇದರ ಶೀರ್ಷಿಕೆಯನ್ನು 'ಪವರ್ ಆಫ್ ವೋಟ್​' ಎಂದು ಆಯೋಗದವರೇ ನೀಡಿದ್ದರು. ಮತದ ಶಕ್ತಿ ಹೇಗಿರುತ್ತದೆ ಎಂಬ ಬಗ್ಗೆ ಅರಿವು ಮೂಡಿಸಬೇಕಿತ್ತು. ಕೆಲವರು ಮತದಾನ ಮಾಡಲು ಹಿಂದೇಟು ಹಾಕುತ್ತಾರೆ. ಯುವ ಜನಾಂಗವೂ ಮತ ಚಲಾಯಿಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಇದನ್ನು ಗಮನದಲ್ಲಿರಿಸಿಕೊಂಡು ತಮ್ಮ ಕಿರುಚಿತ್ರ ತಯಾರಿಸಲಾಗಿದೆ'' ಎಂದು ಅವರು ತಿಳಿಸಿದರು.

''ಕಿರುಚಿತ್ರದಲ್ಲಿ ವೀರಭದ್ರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚುನಾವಣೆಗೆ ಸ್ಪರ್ಧಿಸಿದ ಆತ ಕೊನೆಯ ಗಳಿಗೆಯಲ್ಲಿ ಎರಡು ಮತಗಳಿಂದ ಸೋಲುತ್ತಾನೆ. ಇದರಿಂದ ಒಂದೊಂದು ಮತವೂ ಎಷ್ಟು ಮುಖ್ಯ ಎಂಬುದನ್ನು ತಿಳಿಸುವುದು ನಮ್ಮ ಕಿರುಚಿತ್ರದ ಮುಖ್ಯ ಉದ್ದೇಶವಾಗಿತ್ತು. ನಮ್ಮ ಕಿರುಚಿತ್ರದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ಈಗ ಸ್ಪರ್ಧೆಯಲ್ಲಿ 280 ಕಿರುಚಿತ್ರಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 20 ಸಾವಿರ ರೂ. ನಗದು ಸಹ ಘೋಷಣೆಯಾಗಿದೆ'' ಎಂದು ದಾನಂ ಬಾಬು ಹೇಳಿದರು.

ಕಿರುಚಿತ್ರದ ಕುರಿತು ಮತದಾರರಾದ ಶೋಭಾ ಮಾತನಾಡಿ, ''ಮತದಾನದ ಬಗ್ಗೆ ಅರಿವು ಮೂಡಿಸುವ ಕಿರುಚಿತ್ರ ಉತ್ತಮವಾಗಿ ಮೂಡಿಬಂದಿದೆ. ಮತದಾನ ಎಷ್ಟು ಮುಖ್ಯ ಎಂಬುದನ್ನು ದಾನಂ ತೋರಿಸಿದ್ಧಾರೆ. ಒಬ್ಬ ಪೊಲೀಸ್​ ಅಧಿಕಾರಿಯಾದರೂ ಮನದಟ್ಟು ಮಾಡುವ ಕಿರುಚಿತ್ರಗಳನ್ನು ಮಾಡುತ್ತಿದ್ದಾರೆ. ಕಿರುಚಿತ್ರಗಳು ಕಡಿಮೆ ಸಮಯದಲ್ಲಿ ಚಿತ್ರಿಸಿರುವುದರಿಂದ ಬೇಗ ಮನದಟ್ಟು ಆಗುತ್ತದೆ'' ಎಂದು ಹೇಳಿದರು.

ಮತದಾನದ ಸಮಯದಲ್ಲಿ ನಗರ ಪ್ರದೇಶದವರನ್ನೇ ಗಮನದಲ್ಲಿಟ್ಟುಕೊಂಡು 'ಪವರ್ ಆಫ್ ವೋಟ್' ಕಿರುಚಿತ್ರ ತಯಾರಿಸಲಾಗಿದೆ. ನಾಲ್ಕು ಜನರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎನ್​ಎಡಿ ಕ್ರಿಯೇಷನ್​ನ ನವೀನ್ ಕುಮಾರ್.ಡಿ ತಮ್ಮ ಕ್ರಿಯೇಷನ್ ಮೂಲಕ ಹೊರತಂದಿದ್ದಾರೆ. ದಾನಂ ಬಾಬು ವೀರಭದ್ರ ಪಾತ್ರ ನಿರ್ವಹಿಸಿದ್ದರೆ, ನಿನಾಸಂ ಶ್ರೀಕಾಂತ್, ಮಂಜುನಾಥ್ ನಿನಾಸಂ ಕೂಡ ಕಾಣಿಸಿಕೊಂಡಿದ್ದಾರೆ. ಕಥೆಯನ್ನು ಶಿವು ರಾಥೋಡ್ ಹಾಗೂ ಅಬೀಬ್ ಬರೆದಿದ್ದಾರೆ.

ಇದನ್ನೂ ಓದಿ:ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ: ಮತದಾನದ ಮಹತ್ವ ತಿಳಿಸಿದ ತುಷಾರ್ ಗಿರಿನಾಥ್​ - Cyclothon for voting awareness

Last Updated : Apr 11, 2024, 9:40 PM IST

ABOUT THE AUTHOR

...view details