ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಅವರ ಸಹವರ್ತಿಗಳನ್ನು ಪೊಲೀಸರು ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.
ಹತ್ಯೆ ಆರೋಪದಡಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿತ್ತು. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇದೀಗ18ಕ್ಕೇರಿದೆ. 5 ದಿನಗಳಲ್ಲಿ ಭಾಗಶಃ ವಿಚಾರಣೆ ಪೂರ್ಣಗೊಳಿಸಿರುವ ಪೊಲೀಸರು ಇಂದು ಮಧ್ಯಾಹ್ನ ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸ್ ಕಮಿಷನರ್:ಆರೋಪಿಗಳ ವಿಚಾರಣೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಭೇಟಿ ನೀಡಿ, ಪ್ರಕರಣದ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಹಾಗೂ ಎಸಿಪಿ ಚಂದನ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಸಾಕ್ಷ್ಯನಾಶಕ್ಕೆ ಸಾಥ್ ನೀಡಿದ್ದವನ ಬಂಧನ: ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ಫೋನ್ ಪಡೆದು ಸಾಕ್ಷ್ಯನಾಶಕ್ಕೆ ಸಾಥ್ ನೀಡಿದ್ದ ಮತ್ತೋರ್ವ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ನಲ್ಲಿದ್ದ ಡಾಟಾ ಅಳಿಸಲು ಸಹಾಯ ಮಾಡಿದ್ದ ಆರೋಪದಡಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಹೆಚ್ಚಿನ ವಿವರ ಲಭ್ಯವಾಗಬೇಕಿದೆ.
ಆರೋಪಿ ತಂದೆ ಹೃದಯಾಘಾತದಿಂದ ಸಾವು: ಇನ್ನೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪುತ್ರ ಪೊಲೀಸರಿಗೆ ಶರಣಾಗಿದ್ದಾನೆ ಎಂಬ ಸುದ್ದಿ ಕೇಳಿದ ಆರೋಪಿಯೊಬ್ಬನ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನುಕುಮಾರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಮಗನ ಬಂಧನ ಸುದ್ದಿ ತಿಳಿದ ಅನುಕುಮಾರ್ ತಂದೆ ಚಂದ್ರಪ್ಪ (60) ಚಿತ್ರದುರ್ಗದ ಸಿಹಿ ನೀರಿನ ಹೊಂಡದ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅನುಕುಮಾರ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಗನ ಬಂಧನ, ಪತಿಯ ಸಾವು ಮನೆಯಾಕೆಗೆ ಬರಸಿಡಿಲು ಬಡಿದಂತಾಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ತಂದೆ ಹೃದಯಾಘಾತದಿಂದ ಸಾವು - Darshan case Accused Father Death
ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದ್ದಿಷ್ಟು: ನಟ ದರ್ಶನ್ ವಿರುದ್ಧ ನಿಷೇಧ ಹೇರುವಂತೆ ಒತ್ತಾಯಗಳು ಕೇಳಿಬಂದಿವೆ. ಆದ್ರೆ ತನಿಖೆಯಾಗುವವರೆಗೆ ಕ್ರಮ ಕೈಗೊಳ್ಳಲು ಆಗಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಸ್ಪಷ್ಟಪಡಿಸಿದ್ದಾರೆ. ನಿರ್ಮಾಪಕರು ದರ್ಶನ್ ಸಿನಿಮಾಗಳಿಗೆ ಹಣ ಹಾಕಿದ್ದಾರೆ. ಹಾಗಾಗಿ ತನಿಖೆ ಪೂರ್ಣಗೊಳ್ಳುವವರೆಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ನಿರ್ಮಾಪಕರು ಸಿನಿಮಾಗಳಿಗೆ ಬಂಡವಾಳ ಹಾಕಿದ್ದಾರೆ, ತನಿಖೆಯಾಗುವವರೆಗೆ ದರ್ಶನ್ ಮೇಲೆ ಕ್ರಮ ಇಲ್ಲ: ಎಂ.ಎನ್.ಸುರೇಶ್ - Karnakata Film Chamber