ಕರ್ನಾಟಕ

karnataka

ETV Bharat / state

ಕಳಪೆ ಬೀಜದಿಂದ ಬೆಳೆ ನಷ್ಟ: ಹಾಳಾದ ಆಲೂಗಡ್ಡೆ ಕಿತ್ತೆಸೆದು ಬೆಳಗಾವಿ ರೈತರ ಆಕ್ರೋಶ - Belagavi Farmers Protest - BELAGAVI FARMERS PROTEST

ಕಳಪೆ ಬೀಜದಿಂದ ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿ ರೈತರು ಆಲೂಗಡ್ಡೆ ಸಸಿಗಳನ್ನು ಕಿತ್ತು ಹಾಕಿ ಆಕ್ರೋಶ ಹೊರಹಾಕಿದರು.

Farmer's protest
ಆಲೂಗಡ್ಡೆ ಕಿತ್ತೆಸೆದು ರೈತರ ಆಕ್ರೋಶ (ETV Bharat)

By ETV Bharat Karnataka Team

Published : Sep 3, 2024, 9:26 AM IST

ಬೆಳಗಾವಿ: ಒಮ್ಮೆ ಅನಾವೃಷ್ಟಿಯಿಂದ ಸಂಕಷ್ಟ, ಮತ್ತೊಮ್ಮೆ ಅತಿವೃಷ್ಟಿಯಿಂದ ಬೆಳೆ ನಷ್ಟ. ಇದು ರೈತರ ಪರಿಸ್ಥಿತಿ. ಈಗ ಕಳಪೆ ಬೀಜದಿಂದ ಆಲೂಗಡ್ಡೆ ಬೆಳೆದ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೌದು, ಬೆಳಗಾವಿ ತಾಲೂಕಿನ ಕಡೋಲಿ ಮತ್ತು ಸುತ್ತಲಿನ ಗ್ರಾಮದ ರೈತರ ಆಕ್ರೋಶದ ಕಟ್ಟೆಯೊಡೆದಿದೆ.

ಬೆಳಗಾವಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 1,100 ಹೆಕ್ಟೇರ್ ಪ್ರದೇಶದಲ್ಲಿ‌ ಆಲೂಗಡ್ಡೆ ಬೆಳೆಯಲಾಗಿದೆ. ಕಡೋಲಿ ಗ್ರಾಮದಲ್ಲೇ ಅಂದಾಜು 400 ಎಕರೆಯಲ್ಲಿ ರೈತರು ಆಲೂಗಡ್ಡೆ ಕೃಷಿ ಮಾಡಿದ್ದಾರೆ. ಆದರೆ, ಕಳಪೆ ಆಲೂಗಡ್ಡೆ (ಬಟಾಟೆ) ಬೀಜ ವಿತರಣೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂಬುದು ರೈತರ ದೂರು.

ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ ಮುಂಗಾರು ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದರು. ಕಳಪೆ ಬಿತ್ತನೆ ಬೀಜದ ಪರಿಣಾಮ ಆಲೂಗೆಡ್ಡೆ ಬೀಜ ನೆಲದಲ್ಲೇ ಹಾಳಾಗುತ್ತಿವೆ. ಹೀಗಾಗಿ, ಬೇರು ಸಮೇತ ಬೆಳೆ ಕಿತ್ತುಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಬೀಜ ವಿತರಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸುತ್ತಿದ್ದಾರೆ.

ಕಡೋಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆಯುವ ಆಲೂಗಡ್ಡೆ ದೆಹಲಿ, ಆಗ್ರಾ ಸೇರಿದಂತೆ ದೇಶದ ನಾನಾ ಭಾಗಗಳಿಗೆ ಸರಬರಾಜಾಗುತ್ತದೆ. ಸಾಲ ಮಾಡಿ ಲಕ್ಷಾಂತರ ರೂ‌‌. ವ್ಯಯಿಸಿ ಆಲೂಗಡ್ಡೆ ಬೆಳೆದಿದ್ದ ರೈತರು ಬೆಳೆ ಹಾನಿ ಅನುಭವಿಸಿ ಇದೀಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

'ಈಟಿವಿ ಭಾರತ' ಜೊತೆಗೆ ಮಾತನಾಡಿದ ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ, "ಕಳಪೆ ಬೀಜದಿಂದ ಪೂರ್ತಿ ಆಲೂಗಡ್ಡೆ ಬೆಳೆ ಹಾನಿಯಾಗಿದೆ. ಬೇರೆ ಬೀಜ ಬಿತ್ತಿದ ಆಲೂಗಡ್ಡೆ ಬೆಳೆ ಚೆನ್ನಾಗಿದೆ. ಖಾಸಗಿ ವ್ಯಾಪಾರಿಗಳು ಎಲ್ಲಿಂದಲೋ ತಂದ ಕಳಪೆ ಬೀಜಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ತೋಟಗಾರಿಕಾ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದರು‌.

ರೈತ ಗಜಾನನ ಕಾಗಣಿಕರ್ ಮಾತನಾಡಿ, "ಬೇರೆಯವರ ಎರಡು ಎಕರೆ ಜಮೀನು ವರ್ಷಕ್ಕೆ 30 ಸಾವಿರ ರೂ. ಕೊಟ್ಟು ಲಾವಣಿ ಮಾಡಿದ್ದೇವೆ. ಒಳ್ಳೆಯ ಗೊಬ್ಬರ, ಔಷಧಿ ಸಿಂಪಡಿಸಿದರೂ ಕೂಡ ನಮ್ಮ ಆಲೂಗಡ್ಡೆ ಸಂಪೂರ್ಣ ಹಾಳಾಗಿದೆ. ಎರಡು ಏಕರೆಗೆ ಅಂದಾಜು 1 ಲಕ್ಷ ರೂ. ಖರ್ಚು ಮಾಡಿದ್ದೆವು. ಎರಡೂವರೆ ಲಕ್ಷ ರೂ. ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಈಗ ಎಲ್ಲಾ ನಷ್ಟವಾಗಿದೆ. ಸರ್ಕಾರ ದಯವಿಟ್ಟು ಪರಿಹಾರ ಕೊಟ್ಟು ನಮ್ಮನ್ನು ಬದುಕಿಸಿ" ಎಂದು ಕೇಳಿಕೊಂಡರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಅವರನ್ನು 'ಈಟಿವಿ ಭಾರತ' ಪ್ರತಿನಿಧಿ ಸಂಪರ್ಕಿಸಿದಾಗ, "ಕಳಪೆ ಆಲೂಗಡ್ಡೆ ಬೀಜದಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ತಾಲೂಕು ತೋಟಗಾರಿಕಾ ಅಧಿಕಾರಿಗಳಿಗೆ ಭೇಟಿ ನೀಡಿ, ಪರಿಶೀಲಿಸುವಂತೆ ಸೂಚಿಸುತ್ತೇನೆ. ಅಲ್ಲದೇ ಬೆಳೆ ಹಾನಿ ಸಮೀಕ್ಷೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹಾನಿಯಾಗಿರುವ ಬೆಳೆಗೆ ಸರ್ಕಾರದಿಂದ ಶೀಘ್ರವೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ:ರೈತರ 'ಬಾಳೇ'? ಬೆಲೆ ಬಂದಾಗ, ಬೆಳೆ ಇಲ್ಲ! - Banana Crop

ABOUT THE AUTHOR

...view details