ಹಾವೇರಿ: ಮೆಕ್ಕೆಜೋಳದ ಗಿಡಗಳು ಸೊಂಪಾಗಿ ಬೆಳೆದು ನಿಂತರೂ ಬಹಳಷ್ಟು ಗಿಡಗಳು ಇನ್ನೂ ತೆನೆಗಳನ್ನೇ ಬಿಟ್ಟಿಲ್ಲ. ಕೆಲವು ಗಿಡಗಳು ತೆನೆ ಬಿಟ್ಟರೂ ಗಾತ್ರ ಚಿಕ್ಕದಾಗಿವೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಸವಣೂರು ತಾಲೂಕಿನ ತೊಂಡೂರು ಗ್ರಾಮದ ರೈತರಿಗೆ ಈಗ ನಿರಾಸೆಯಾಗಿದೆ.
ಗ್ರಮದ 10ಕ್ಕೂ ಅಧಿಕ ರೈತರು ಸುಮಾರು 50ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಗೋವಿನ ಜೋಳ ಬಿತ್ತಿದ್ದರು. ಗಿಡಗಳು ಆಳೆತ್ತರ ಬೆಳೆದು ನಿಂತಿವೆ. ಆದರೆ ತೆನೆಗಳು ಬೆರಳೆಣಿಕೆಯಷ್ಟಿವೆ. ಪ್ರತಿವರ್ಷ ಎಕರೆಗೆ ಸುಮಾರು 25ರಿಂದ 30 ಕ್ವಿಂಟಾಲ್ ಮೆಕ್ಕೆ ಜೋಳ ಬೆಳಯುತ್ತಿದ್ದ ರೈತರು ಈ ವರ್ಷ ಹೊಸ ಬೀಜದಿಂದ 40 ಕ್ವಿಂಟಾಲ್ ಮೆಕ್ಕೆಜೋಳ ಫಸಲು ಸಿಗುವ ಖುಷಿಯಲ್ಲಿದ್ದರು. ಆದರೀಗ ಗಿಡಗಳಲ್ಲಿ ಬಿಟ್ಟಿರುವ ತೆನೆಗಳು ಕೂಡ ಚಿಕ್ಕದಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
"ಈ ವರ್ಷ ಎಕರೆಗೆ 40 ಕ್ವಿಂಟಾಲ್ ಫಸಲು ಕೊಡುವ ಬೀಜ ಸಿಕ್ಕಿದೆ ಎಂದು ಹೊಸ ತಳಿಯ ಮೆಕ್ಕೆಜೋಳದ ಬೀಜ ತಂದು ಬಿತ್ತನೆ ಮಾಡಿದ್ದೆವು. ಒಂದು ಪಾಕೆಟ್ ಬೀಜಕ್ಕೆ ಎರಡು ಸಾವಿರ ರೂ. ಕೊಟ್ಟಿದ್ದೆವು. ಗಿಡಗಳು ಚೆನ್ನಾಗಿ ಬೆಳೆದು ನಿಂತಿವೆ. ಆದರೆ ಇವುಗಳಲ್ಲಿ ಬಿಟ್ಟಿರುವ ತೆನೆಗಳನ್ನು ನೋಡಿದರೆ 40 ಕ್ವಿಂಟಾಲ್ ಬದಲು ಐದು ಕ್ವಿಂಟಲ್ ಇಳುವರಿ ಬರುವುದು ಅನುಮಾನ. ಎಕರೆಗೆ ಕನಿಷ್ಟ 25 ಸಾವಿರ ಖರ್ಚು ಮಾಡಿದ್ದೇವೆ. ಸುಮಾರು 50 ಸಾವಿರ ಆದಾಯ ಬರುತ್ತದೆ ಎನ್ನುವ ಕನಸು ಕಂಡಿದ್ದೆವು. ಆದರೆ ಈ ಹೊಸ ತಳಿಯ ಬೀಜ ನಮಗೆ ನಷ್ಟ ತಂದಿದೆ. ಅಧಿಕ ಲಾಭವಿರಲಿ, ಪ್ರತಿ ಎಕರೆಗೆ ಹಾಕಿದ ಖರ್ಚು ಸಹ ಈ ಫಸಲಿನಲ್ಲಿ ಸಿಗುವುದಿಲ್ಲ. ಸೊಂಪಾಗಿ ಬೆಳೆದಿರುವ ಗಿಡಗಳಲ್ಲೂ ಅವುಗಳ ರವದಿಗೆ ಚುಕ್ಕೆ ಕಾಣಿಸಿಕೊಂಡಿದ್ದು, ಸೊಪ್ಪು ಕೂಡ ಜಾನುವಾರುಗಳಿಗೆ ಹಾಕಲು ಸಾಧ್ಯವಿಲ್ಲ" ಎಂದು ರೈತರು ಬೇಸರ ವ್ಯಕ್ತಪಡಿಸಿದರು.