ಬೆಂಗಳೂರು:ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣದ ಆರೋಪಿಗಾಗಿ ಕೇಂದ್ರ ವಿಭಾಗದ ಪೊಲೀಸರು ಹೊರರಾಜ್ಯಗಳಿಗೆ ತೆರಳಿ ಹಂತಕನ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಆರೋಪಿ ಪತ್ತೆಗಾಗಿ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು, ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಶಂಕೆ ವ್ಯಕ್ತಪಡಿಸಿರುವ ವ್ಯಕ್ತಿ ಸೇರಿದಂತೆ ಮೃತಳ ಸಂಪರ್ಕದಲ್ಲಿದ್ದ ಕೆಲವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತ್ತೊಂದೆಡೆ, ಆಕೆಯ ಸಂಪರ್ಕದಲ್ಲಿದವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಆರೋಪಿ ಸುಳಿವು ಸಿಕ್ಕಿದೆ':ಹಂತಕನ ಬಂಧನಕ್ಕಾಗಿ ವಿಶೇಷ ಆರು ತಂಡಗಳನ್ನು ರಚಿಸಲಾಗಿದ್ದು, ನಾಲ್ಕು ತಂಡಗಳು ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಪ್ರಯಾಣ ಬೆಳೆಸಿವೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರತಿಕ್ರಿಯಿಸಿದ್ದು, 'ಆರೋಪಿಯ ಸುಳಿವು ದೊರೆತಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು' ಎಂದಿದ್ದಾರೆ.
ಲ್ಯಾಬ್ಗೆ ಫ್ರಿಡ್ಜ್ ರವಾನೆ:ಹರಿತವಾದ ಆಯುಧದಿಂದ ಮಹಾಲಕ್ಷ್ಮೀ ಮೃತದೇಹವನ್ನು ಸುಮಾರು 50 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಹಂತಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಎಫ್ಎಸ್ಎಲ್ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ್ದರು. ಎಲ್ಲ ರೀತಿಯ ಸ್ಯಾಂಪಲ್, ಸಾಕ್ಷ್ಯಾಧಾರ ಸಂಗ್ರಹಿಸಿದ್ದ ಅಧಿಕಾರಿಗಳು ಮೃತದೇಹವಿಟ್ಟಿದ್ದ ಫ್ರಿಡ್ಜ್ನ್ನು ಸೋಮವಾರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಘಟನೆ ನಡೆದ ಮನೆಗೆ ತೆರಳಿದ್ದ ಪೊಲೀಸರು, ಗೂಡ್ಸ್ ವಾಹನದ ಮೂಲಕ ಫ್ರಿಡ್ಜ್ನ್ನು ಲ್ಯಾಬ್ಗೆ ಕಳುಹಿಸಿಕೊಟ್ಟಿದ್ದಾರೆ.
ಗೂಡ್ಸ್ ವಾಹನದಲ್ಲಿ ಫ್ರಿಡ್ಜ್ ರವಾನೆ (ETV Bharat)
ಸಮಗ್ರ ವರದಿ ನೀಡಿ ಎಂದ ಮಹಿಳಾ ಆಯೋಗ: ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ಹತ್ಯೆ ಹಂತಕನನ್ನು ತ್ವರಿತವಾಗಿ ಬಂಧಿಸಬೇಕೆಂದು ಒತ್ತಾಯಿಸಿದೆ. ಬರ್ಬರ ಹಾಗೂ ಕ್ರೂರವಾಗಿ ಹತ್ಯೆಗೈದಿರುವ ಪ್ರಕರಣದ ತನಿಖೆ ಪಾರದರ್ಶಕವಾಗಿರಬೇಕು. ಕೊಲೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಮೂರು ದಿನದೊಳಗಾಗಿ ವರದಿ ನೀಡಬೇಕೆಂದು ಆಗ್ರಹಿಸಿ ಮಹಿಳಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.