ಹಾವೇರಿ:ಜಿಲ್ಲೆಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು 873 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಗ್ಯಾಂಗ್ ರೇಪ್ ಘಟನೆ ನಡೆದು 58 ದಿನಗಳ ಬಳಿಕ ಹಾನಗಲ್ ಜೆಎಂಎಫ್ಸಿ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಗುರುತು ಪತ್ತೆ ಪರೇಡ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು. ಇದನ್ನು ಆಧರಿಸಿ ಪ್ರಮುಖ 7 ಆರೋಪಿಗಳು ಸೇರಿದಂತೆ 19 ಜನರ ಹೆಸರುಗಳನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಜ.8 ರಂದು ಹಾನಗಲ್ ಬಳಿಯ ನಾಲ್ಕರ ಕ್ರಾಸ್ ಬಳಿ ಶಿರಸಿ ಮೂಲದ 26 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಪ್ರಕರಣ ಸಂಬಂಧ ಒಟ್ಟು 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. 20 ದಿನಗಳ ಹಿಂದೆಯೇ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿದ್ದರು. ಆದರೆ, ಫೊರೆನ್ಸಿಕ್ ಲ್ಯಾಬ್ ವರದಿ ಹಾಗೂ ಡಿಎನ್ಎ ವರದಿಗಳು ಬಂದ ಬಳಿಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಗ್ಯಾಂಗ್ ರೇಪ್ ಘಟನೆಗೆ ಸಂಬಂಧಿಸಿದಂತೆ ಹಲವು ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಡಿಎನ್ಎ ಸ್ಯಾಂಪಲ್, ಕೂದಲು, ಆರೋಪಿಗಳ ರಕ್ತದ ಮಾದರಿ ಸೇರಿದಂತೆ ಘಟನೆ ವೇಳೆ ಸಿಕ್ಕ ಬಟ್ಟೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಘಟನೆ ವೇಳೆ ಬಳಸಿದ್ದ ಬೈಕ್, ಕಾರ್ ಸೇರಿದಂತೆ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಫೋರೆನ್ಸಿಕ್ ತಜ್ಞರು, ವೈದ್ಯರು, ಪೊಲೀಸರು, ಕೆಲವು ಸ್ಥಳೀಯರು ಸೇರಿದಂತೆ 87 ಸಾಕ್ಷಿಗಳನ್ನು ಚಾರ್ಜ್ ಶೀಟ್ನಲ್ಲಿ ಪೊಲೀಸರು ದಾಖಲಿಸಿದ್ದಾರೆ.