ಬೆಂಗಳೂರು:ನಿರಂತರ ಶ್ರಮ, ಅಚಲ ನಂಬಿಕೆ ಹಾಗೂ ಆತ್ಮವಿಶ್ವಾಸವಿದ್ದರೆ ಜಗತ್ತು ಗೆಲ್ಲಬಹುದು ಎಂಬುದು ಸಾರ್ವಕಾಲಿಕ ಸತ್ಯ. ಅದೇ ರೀತಿ ಈ ಮೂರು ತತ್ವಗಳನ್ನು ನಂಬಿ ಪೊಲೀಸ್ ಕೆಲಸದ ನಡುವೆಯೂ ನಗರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಜಡೇಮ್ಮನವರ್ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ಬರೆದು ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಪರೀಕ್ಷೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಜಡೇಮ್ಮನವರ್ 644ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕನ್ನಡದಲ್ಲೇ ಪರೀಕ್ಷೆ ಬರೆದಿದ್ದರು ಎಂಬುದು ಹೆಗ್ಗಳಿಕೆ. 2016ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡ ಶಾಂತಪ್ಪ ಮೂಲತಃ ಬಳ್ಳಾರಿಯವರು. ಬಳ್ಳಾರಿ ಮುನಿಸಿಪಾಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದಾರೆ.
7 ಬಾರಿ ಪರೀಕ್ಷೆ ಎದುರಿಸಿದ್ದರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ನನಸು ಮಾಡಿಕೊಂಡಿರುವ ಶಾಂತಪ್ಪ, ಈ ಹಿಂದೆ 7 ಬಾರಿ ಪರೀಕ್ಷೆ ಬರೆದಿದ್ದರು. ಈ ಮಧ್ಯೆ ಮೂರು ಅವಧಿಯಲ್ಲಿ ಸಂದರ್ಶನದಲ್ಲಿ ಫೇಲಾಗಿದ್ದರು.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶಾಂತಪ್ಪ, "ಚಿಕ್ಕ ವಯಸ್ಸಿನಿಂದ ಉನ್ನತ ಅಧಿಕಾರಿಯಾಗಬೇಕೆಂಬ ಅಭಿಲಾಷೆ ಹೊಂದಿದ್ದೆ. ಇದರಂತೆ ಪೊಲೀಸ್ ಇಲಾಖೆಗೆ ಸೇರಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಕೆಲಸದ ಒತ್ತಡದ ನಡುವೆಯೂ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಹಲವು ಬಾರಿ ಬಂದೋಬಸ್ತ್ ಕರ್ತವ್ಯದ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಓದಿದ್ದೆ. ನಿರಂತರ ಪರಿಶ್ರಮವೇ ಈ ಸಾಧನೆಗೆ ಕಾರಣ" ಎಂದು ಹರ್ಷ ವ್ಯಕ್ತಪಡಿಸಿದರು.