ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಮಕ್ಕಳ ಮಾರಾಟ ಪ್ರಕರಣದ ಕಿಂಗ್ ಪಿನ್ ಅಬ್ದುಲ್ ಗಫಾರ್ ಲಾಡಖಾನ್ ತೋಟದ ಮನೆಗೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಆರೋಪಿಗೆ ಸೇರಿದ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿರುವ ಫಾರ್ಮ್ಹೌಸ್ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅನಧಿಕೃತ ಕ್ಲಿನಿಕ್ ಹೊಂದಿರುವ ಹಾಗು ಮಕ್ಕಳ ಮಾರಾಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಅಬ್ದುಲ್ ಮಾಲೀಕತ್ವದ ತೋಟದ ಮನೆ ಇದಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಕ್ಲಿನಿಕ್ ಸೀಜ್ ಮಾಡಿದ್ದರು. ಮಕ್ಕಳ ಮಾರಾಟ ಮತ್ತು ಭ್ರೂಣ ಹತ್ಯೆಯಲ್ಲೂ ಆತನ ಪಾತ್ರ ಇರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಲಾಡಖಾನ್ಗೆ ಸೇರಿದ ತೋಟದ ಮನೆಯಲ್ಲಿ ಭ್ರೂಣ ಹತ್ಯೆ, ಅಕ್ರಮ ಚಟುವಟಿಕೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆ ಸುತ್ತಮುತ್ತ ಸಿರಿಂಜ್ ಕವರ್, ವೈದ್ಯಕೀಯ ಪರಿಕರಗಳು ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಸಾಕ್ಷಿ ನಾಶ ಆಗಬಾರದೆಂದು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ತೋಟದ ಮನೆಗೆ ಭದ್ರತೆ ಒದಗಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಏನಿದು ಪ್ರಕರಣ: ಜೂನ್ 10ರಂದು ಖತರ್ನಾಕ್ ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಆರ್‌ಎಂಪಿ ವೈದ್ಯ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಮಾಳಮಾರುತಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದರು.