ಕೊಡಗು:ಸೋಮವಾರಪೇಟೆಯಲ್ಲಿ ನಿಶ್ಚಿತಾರ್ಥ ಮುಂದೂಡಿಕೆಯಾದ ಕೋಪದಲ್ಲಿ 16 ವರ್ಷದ ಬಾಲಕಿಯ ತಲೆ ಕಡಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರಕಾಶ್ (35) ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಯುವಕನ ಶವ ಪತ್ತೆಯಾಗಿದೆ ಎಂಬುದು ವದಂತಿ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಬಾಲಕಿ ಕೊಲೆ ಮಾಡಿ ರುಂಡ ತೆಗೆದುಕೊಂಡು ಹೋಗಿರುವ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ. ಈ ನಡುವೆ ಯುವಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂಬ ಸುದ್ದಿ ಹರಡಿದೆ. ಆದರೆ, ಆತ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಶೋಧ ಮುಂದುವರೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮದುವೆ ನಿಶ್ಚಿತಾರ್ಥ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಕುಪಿತಗೊಂಡ ಆರೋಪಿ ಪ್ರಕಾಶ್, ಗುರುವಾರ ಬಾಲಕಿಯ ತಲೆ ಕಡಿದು ಕೊಲೆ ಮಾಡಿದ್ದ. ಬಳಿಕ ಆರೋಪಿಯು ಪರಾರಿಯಾಗಿದ್ದಾನೆ. ಸೋಮವಾರಪೇಟೆಯ ಸೂರ್ಲಬ್ಬಿ ಗ್ರಾಮದ ಹಮ್ಮಿಯಾಲದಲ್ಲಿ ಘಟನೆ ನಡೆದಿತ್ತು. ಎಸ್ಎಸ್ಎಲ್ಸಿ ಫಲಿತಾಂಶ ಬಂದ ಸಂಭ್ರಮದಲ್ಲಿದ್ದ ಬಾಲಕಿ ಯುವಕನ ಕೋಪಕ್ಕೆ ಬಲಿಯಾಗಿದ್ದಳು. ಬಾಲಕಿಯ ರುಂಡ ಕೂಡ ಇನ್ನೂ ಪತ್ತೆಯಾಗಿಲ್ಲ, ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣದ ವಿವರ:ಗುರುವಾರ ಆರೋಪಿ ಪ್ರಕಾಶ್ ಮತ್ತು ಬಾಲಕಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ, ಅಪ್ರಾಪ್ತೆಯ ನಿಶ್ಚಿತಾರ್ಥದ ಬಗ್ಗೆ ಮಾಹಿತಿ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಎರಡೂ ಕಡೆಯ ಪೋಷಕರನ್ನು ಮನವೊಲಿಸಿದ್ದರು. ಬಾಲಕಿ 18 ವರ್ಷ ದಾಟಿದ ಬಳಿಕ ಪ್ರಕಾಶ್ ಜೊತೆ ಮದುವೆ ಮಾಡುವುದಾಗಿ ಎರಡೂ ಮನೆಯ ಪೋಷಕರು ಒಪ್ಪಿದ್ದರು. ಬಳಿಕ ಅಧಿಕಾರಿಗಳು ಮತ್ತು ಯುವಕನ ಮನೆಯವರು ಬಾಲಕಿಯ ಮನೆಯಿಂದ ತೆರಳಿದ್ದರು.