ಕರ್ನಾಟಕ

karnataka

ETV Bharat / state

ಗೂಗಲ್ ಮ್ಯಾಪ್ ನಂಬಿ ಹಾದಿತಪ್ಪಿದರು: ರಾತ್ರಿಯಿಡೀ ಖಾನಾಪುರ ದಟ್ಟಾರಣ್ಯದಲ್ಲಿ ಕಾಲ ಕಳೆದ ಬಿಹಾರಿ ಕುಟುಂಬ - BIHAR FAMILY STRANDED IN FOREST

ಗೂಗಲ್‌ ಮ್ಯಾಪ್‌ ಪ್ರಕಾರ ಪ್ರಯಾಣಿಸಿದ ಬಿಹಾರದ ಕುಟುಂಬವೊಂದು ದಟ್ಟ ಅರಣ್ಯದಲ್ಲಿ ದಾರಿ ಕಾಣದಾಗದೇ, ರಾತ್ರಿಯಿಡೀ ಅಲ್ಲಿಯೇ ಕಳೆದ ಘಟನೆ ನಡೆದಿದೆ.

bihar family
ಬಿಹಾರ ಕುಟುಂಬಕ್ಕೆ ನೆರವಾದ ಪೊಲೀಸರು (ETV Bharat)

By ETV Bharat Karnataka Team

Published : Dec 6, 2024, 1:44 PM IST

ಬೆಳಗಾವಿ:ಕಾರಿನಲ್ಲಿ ಗೂಗಲ್‌ ಮ್ಯಾಪ್‌ ನೋಡಿಕೊಂಡು ಪ್ರಯಾಣಿಸಿದ ಬಿಹಾರದ ಕುಟುಂಬವೊಂದು ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ವನ್ಯಧಾಮದ ದಟ್ಟ ಅರಣ್ಯದಲ್ಲಿ ದಾರಿ ಕಾಣದಾಗದೇ, ಇಡೀ ರಾತ್ರಿ ಅಲ್ಲಿಯೇ ಕಳೆದಿರುವ ಘಟನೆ ನಡೆದಿದೆ. ಕೊನೆಗೆ ಖಾನಾಪುರ ಪೊಲೀಸರ ಸಹಾಯದಿಂದ‌ ಅವರನ್ನು ರಕ್ಷಿಸಲಾಗಿದೆ.‌

ಬಿಹಾರದ ರಾಜದಾಸ್‌ ರಣಜಿತ್‌ದಾಸ್‌ ಎಂಬುವರು ಉಜ್ಜಯಿನಿಯಿಂದ ಗೋವಾಕ್ಕೆ ಕುಟುಂಬ ಸಮೇತ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಬುಧವಾರ ಗೋವಾದಲ್ಲಿ ತಾವು ತಲುಪಬೇಕಿದ್ದ ಸ್ಥಳದ ಲೊಕೇಶನ್‌ ಹಾಕಿಕೊಂಡು ಪ್ರಯಾಣಿಸುತ್ತಿದ್ದರು. ಆಗ ಅವರು ಮಧ್ಯರಾತ್ರಿ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ದಟ್ಟ ಕಾಡಿನೊಳಗೆ ತೆರಳಿದ್ದಾರೆ. ಅಲ್ಲಿ ಮೊಬೈಲ್ ನೆಟ್​​ವರ್ಕ್ ಕೂಡ ಸಿಕ್ಕಿಲ್ಲ. ಕಗ್ಗತ್ತಲಲ್ಲಿ ಸಿಲುಕಿದ್ದ ರಾಜದಾಸ್‌ ಕುಟುಂಬ ತೀವ್ರ ಆತಂಕಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರ ಕುಟುಂಬಕ್ಕೆ ನೆರವಾದ ಪೊಲೀಸರು (ETV Bharat)

ಧೈರ್ಯದಿಂದ ರಾತ್ರಿ ಕಳೆದ ಕುಟುಂಬ: ಇದರಿಂದ ಧೃತಿಗೆಡದ ರಾಜದಾಸ್‌, ತಮ್ಮ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಇಡೀ ರಾತ್ರಿ ಅಲ್ಲಿಯೇ ಕಳೆದಿದ್ದಾರೆ. ಬೆಳಗ್ಗೆ ಆಗುತ್ತಲೇ ತಾವು ಇರುವ ಸ್ಥಳದಿಂದ ಮೂರ್ನಾಲ್ಕು ಕಿ.ಮೀ ದೂರದ ಪ್ರದೇಶಕ್ಕೆ ಬಂದಾಗ, ಮೊಬೈಲ್‌ ನೆಟ್‌ವರ್ಕ್ ಸಿಕ್ಕಿದೆ. ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್‌ ಕಂಟ್ರೋಲ್‌ ರೂಂ ಜೊತೆ ಸಂಪರ್ಕ ಸಾಧಿಸಿದ್ದಾರೆ. ತಮಗೆ ದಾರಿ ಕಾಣದಾಗದೇ ಸಂಕಷ್ಟದಲ್ಲಿದ್ದು, ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಖಾನಾಪುರ ಠಾಣೆ ಪಿಐ ಮಂಜುನಾಥ ನಾಯ್ಕ, 112 ವಾಹನದ ಇನ್‌ - ಚಾರ್ಜ್ ಎಎಸ್‌ಐ ಬಡಿಗೇರ, ಮುಖ್ಯ ಪೇದೆ ಜಯರಾಮ ಹಮ್ಮಣ್ಣವರ, ಪೇದೆ ಮಂಜುನಾಥ ಮುಸಳಿ ಹಾಗೂ ಸಿಬ್ಬಂದಿ, ರಾಜದಾಸ್‌ ಅವರ ಲೈವ್‌ ಲೊಕೇಶನ್‌ ನೆರವಿನಿಂದ ಅವರಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಅವರನ್ನು ಸಂಪರ್ಕ ಮಾಡಿದ ಪೊಲೀಸರು, ಬಳಿಕ ಸ್ಥಳಕ್ಕೆ ಹೋಗಿ ಮುಖ್ಯ ರಸ್ತೆಗೆ ಕರೆ ತಂದಿದ್ದಾರೆ. ಮುಂದೆ ಗೋವಾಗೆ ಹೋಗಲು ಅನುಕೂಲ ಮಾಡಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಗೂಗಲ್ ಮ್ಯಾಪ್ ಎಡವಟ್ಟು: ಸೇತುವೆಯಿಂದ ನದಿಗೆ ಬಿದ್ದ ಕಾರು, ಸ್ಥಳದಲ್ಲೇ ಮೂವರು ಸಾವು

ABOUT THE AUTHOR

...view details