ರಾಮನಗರ: ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಗಳಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ದಲಿತ ಸಮುದಾಯದವರ ಮೇಲೆ ಹಲ್ಲೆಯ ಜೊತೆಗೆ ಓರ್ವನ ಕೈ ತುಂಡರಿಸಿ ಪರಾರಿಯಾಗಿದ್ದ ಪ್ರಕರಣದಲ್ಲಿ ಆರೋಪಿಗಳಾಗಿರುವ ರೌಡಿಶೀಟರ್ ಹರ್ಷ ಅಲಿಯಾಸ್ ಕೈಮ ಮತ್ತು ಕರುಣೇಶ್ ಅಲಿಯಾಸ್ ಕಣ್ಣನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಆರೋಪಿಗಳಿರುವ ಮಾಹಿತಿ ಅರಿತ ಪೊಲೀಸ್ ತಂಡ ಮಳಗಾಳು ಗ್ರಾಮಕ್ಕೆ ತೆರಳಿತ್ತು. ಈ ಸಂದರ್ಭದಲ್ಲಿ ಬಂಧಿಸಲು ಬಂದ ಪೊಲೀಸರ ಮೇಲೆಯೇ ರೌಡಿಶೀಟರ್ಗಳು ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ, ಗ್ರಾಮಾಂತರ ಸಿಪಿಐ ಕೃಷ್ಣ ಲಮಾಣಿ, ಪಿಎಸ್ಐಗಳಾದ ಮನೋಹರ್, ರವಿಕುಮಾರ್ ನೇತೃತ್ವದ ತಂಡ ಫೈರಿಂಗ್ ಮಾಡಿ, ಹಿಡಿದಿದ್ದಾರೆ.
ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಾದ ರಾಜಶೇಖರ್, ಶಿವಕುಮಾರ್ ಹಾಗು ಗುಂಡೇಟಿನಿಂದ ಗಾಯಗೊಂಡ ಆರೋಪಿಗಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರ್ಷ ಹಾಗೂ ಕರುಣೇಶ್ ಮೇಲೆ 5ಕ್ಕೂ ಹೆಚ್ಚು ಪ್ರಕರಣಗಳಿವೆ.
ಘಟನಾ ಸ್ಥಳಕ್ಕೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಬೇಟಿ ನೀಡಿದ್ದು, ಸ್ಥಳೀಯ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಪೊಲೀಸರು ಹಾಗು ಆರೋಪಿಗಳ ಆರೋಗ್ಯ ವಿಚಾರಿಸಿದರು.
ದಲಿತ ಸಂಘಟನೆಗಳಿಂದ ಪ್ರತಿಭಟನೆ:ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟಿಸಿದ್ದವು. ಈ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ಪಿಸ್ತೂಲ್: ಕಳ್ಳನ ಕಾಲಿಗೆ ಗುಂಡು ಹೊಡೆದ ಲೇಡಿ ಪಿಎಸ್ಐ - Hubballi Police Firing