ಕಲಬುರಗಿ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಿಗೆ ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಆರೋಪಿಯು ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿ, ಬಂಧಿಸಿರುವ ಘಟನೆ ಶನಿವಾರ ನಡೆದಿದೆ.
ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ:ಈ ಕುರಿತು ಎಸ್ಪಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ''ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಸೆ. 13 ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಜಮಾದರ್ ಹತ್ಯೆ ನಡೆದಿತ್ತು. ವಿಶ್ವನಾಥ್ ಜಮಾದಾರ್ ಕೊಲೆ ಕೇಸ್ನ ಆರೋಪಿ ಮಾಡ್ಯಾಳ್ ಗ್ರಾಮದ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ವಿಶೇಷ ಪೊಲೀಸ್ ತಂಡ ತೆರಳಿತ್ತು. ಈ ವೇಳೆ ನಿಂಬರ್ಗಾ ಠಾಣೆ ಪಿಎಸ್‌ಐ ಇಂದುಮತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಆರೋಪಿ ಲಕ್ಷ್ಮಣ್ ಪೂಜಾರಿ ಪರಾರಿಯಾಗಲು ಯತ್ನಿಸುವಾಗ ಆತ್ಮರಕ್ಷಣೆಗಾಗಿ ಅಫಜಲಪುರ ಠಾಣೆ ಪಿಎಸ್‌ಐ ಸೋಮಲಿಂಗ್ ಒಡೆಯರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ'' ಎಂದು ತಿಳಿಸಿದರು.
ಪಿಎಸ್‌ಐ ಆಸ್ಪತ್ರೆಗೆ ದಾಖಲು:''ಆಗಲೂ ಕೇಳದಿದ್ದಾಗ ಆರೋಪಿ ಪೂಜಾರಿ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗುಂಡೇಟಿನಿಂದ ಕುಸಿದು ಬಿದ್ದ ಆರೋಪಿ ಲಕ್ಷ್ಮಣ್ ಪೂಜಾರಿಯನ್ನು ವಶಕ್ಕೆ ಪಡೆದು, ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಇತ್ತ ಗಾಯಾಳು ಪಿಎಸ್‌ಐ ಇಂದುಮತಿ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ'' ಎಂದರು.