ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ (ETV Bharat) ಧಾರವಾಡ:ಪೊಲೀಸರ ಮೇಲೆ ಹಲ್ಲೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ ಪೋಕ್ಸೋ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ, ಹಿಡಿದಿದ್ದಾರೆ. ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಸಿಪಿಐ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್ ಗಾಯಗೊಂಡಿದ್ದು, ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿಸಿದ ಸಂಬಂಧ ಎಪಿಎಂಸಿ ನಿವಾಸಿಯಾಗಿರುವ ಆರೋಪಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಆರೋಪಿಯನ್ನು ಕರೆತರಲು ಹೋದಾಗ ಘಟನೆ ನಡೆದಿದೆ. ಇನ್ನು ಆಸ್ಪತ್ರೆಗೆ ಅವಳಿ ನಗರದ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಭೇಟಿ ನೀಡಿ, ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಎಪಿಎಂಸಿ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಯನ್ನು ಪತ್ತೆಹಚ್ಚಲು ಎಲ್ಲಕಡೆ ಟೀಂ ಕಳಿಸಿದ್ದೆವು. ಈ ವೇಳೆ ಸುತ್ತಗಟ್ಟಿ ಗ್ರಾಮದ ಸಮೀಪ ಆರೋಪಿ ಇರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ 11.30ರ ಸುಮಾರಿಗೆ ಧಾರವಾಡ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗನಾಳ ಮತ್ತು ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಆರೋಪಿಯನ್ನು ಹಿಡಿದು ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾಗಿದ್ದರು. ಈ ವೇಳೆ ಜೀಪ್ ಹತ್ತುವಾಗ ಆರೋಪಿಯು, ನಮ್ಮ ಪೊಲೀಸ್ ಕಾನ್ಸ್ಟೇಬಲ್ ಅರುಣ್ ಭುಜಕ್ಕೆ ಪೆನ್ ರೀತಿಯ ಚಾಕುನಿಂದ ಚುಚ್ಚಿದ್ದಾನೆ. ಬಳಿಕ ಇನ್ಸ್ಪೆಕ್ಟರ್ ಅವರ ಮಂಡಿ ಮತ್ತು ಬೆನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಆರೋಪಿಯನ್ನು ಕಂಟ್ರೋಲ್ ಮಾಡಲು ಮತ್ತು ಸ್ವರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ರು, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ನಮ್ಮ ಸಿಪಿಐ ಸಂಗಮೇಶ್ ಅವರು ಆರೋಪಿಯ ಎಡ ಕಾಲಿಗೆ ಗುಂಡು ಹೊಡೆದು ಹಿಡಿದಿದ್ದಾರೆ. ಸದ್ಯ ನಮ್ಮ ಇಬ್ಬರು ಸಿಬ್ಬಂದಿ ಮತ್ತು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನಮ್ಮ ಅಧಿಕಾರಿ ಸಂಗಮೇಶ ಮತ್ತು ಪೊಲೀಸ್ ಕಾನ್ಸ್ಟೇಬಲ್ ಅರುಣ್ ಕೂಡ ಗಾಯಗೊಂಡಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹಾಗೆಯೇ ಆರೋಪಿಗೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದೇವೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿರುವ ಸಂಬಂಧ ಆರೋಪಿಯ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತಂಗಿಯ ಅಪ್ರಾಪ್ತ ಮಗಳ ಮೇಲೆ ರೌಡಿ ಶೀಟರ್ ಅತ್ಯಾಚಾರ ಆರೋಪ; ಪೋಕ್ಸೋ ಪ್ರಕರಣ ದಾಖಲು - Rape on Minor Girl