ಸೈಲೆನ್ಸರ್‌ಗಳನ್ನು ರೋಲರ್ ಹತ್ತಿಸಿ ನಾಶಪಡಿಸಿದ ಪೊಲೀಸರು ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯು ಹಾಫ್ ಹೆಲ್ಮೆಟ್ ಹಾಗೂ ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್‌ಗಳನ್ನು ನಾಶಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಗರದ ಟಿ.ಎಸ್.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಗುರುವಾರ ಸಂಜೆ ಹಾಫ್ ಹೆಲ್ಮೆಟ್ ಮತ್ತು ಸೈಲೆನ್ಸರ್‌ಗಳನ್ನು ರಾಶಿ ಹಾಕಿ ಅವುಗಳ ಮೇಲೆ ರೋಲರ್ ಹತ್ತಿಸಿ ಪುಡಿಗಟ್ಟಿದರು.
ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಿಸುವ ಉದ್ದೇಶದಿಂದ ಹೆಲ್ಮೆಟ್ ಕುರಿತು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಆದರೆ ಪೊಲೀಸರು ಹಿಡಿದು ದಂಡ ಮಾತ್ರ ಹಾಕುತ್ತಾರೆ ಎಂದು ಸವಾರರು ಹಾಫ್ ಹೆಲ್ಮೆಟ್ ಧರಿಸಿಕೊಂಡು ಓಡಾಡುತ್ತಿದ್ದರು.
ಅಪಘಾತದ ಸಂದರ್ಭದಲ್ಲಿ ಇಂಥ ಹೆಲ್ಮೆಟ್ ಧರಿಸಿರುವ ದ್ವಿಚಕ್ರ ವಾಹನ ಸವಾರ ತಮ್ಮ ತಲೆಯನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗುತ್ತಾನೆ. ಬಹುತೇಕ ಸಮಯದಲ್ಲಿ ಸವಾರರ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಹೀಗಾಗಿ ಫುಲ್ ಹೆಲ್ಮೆಟ್ ಧರಿಸಬೇಕೆಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಿದ್ದರೂ ಕೂಡಾ ಅರ್ಧ ಹೆಲ್ಮೆಟ್ ಧರಿಸಿಕೊಂಡೇ ವಾಹನ ಚಲಾಯಿಸುವ ಸವಾರರನ್ನು ತಡೆದು ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಇದೇ ರೀತಿ ಜಿಲ್ಲಾದ್ಯಾಂತ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸೈಲೆನ್ಸರ್ ನಾಶ:ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್‌ಗಳನ್ನು ಬೈಕ್‌ಗೆ ಅಳವಡಿಸಿಕೊಂಡು ಹೋಗುವುದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು 50ಕ್ಕೂ ಹೆಚ್ಚು ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವುಗಳನ್ನು ಮಾಲೀಕರ ಸಮ್ಮುಖದಲ್ಲಿಯೇ ಎಸ್ಪಿ ಮಿಥುನ್ ಕುಮಾರ್ ಹಾಗೂ ಎಎಸ್ಪಿ ಅನಿಲ್ ಕುಮಾರ್ ಅವರು ತಮ್ಮ ಸಿಬ್ಬಂದಿ ಮೂಲಕ ರೋಲರ್ ಹರಿಸಿ ನಾಶಪಡಿಸಿ ಕಠಿಣ ಸಂದೇಶ ರವಾನಿಸಿದರು.
ಇದನ್ನೂ ಓದಿ:ಸಂಚಾರ ನಿಯಮ ಉಲ್ಲಂಘಿಸುವ ನೀರಿನ ಟ್ಯಾಂಕರ್ ಚಾಲಕರ ವಿರುದ್ಧ ಕಾರ್ಯಾಚರಣೆ: 595 ಪ್ರಕರಣ ದಾಖಲು