ಬೆಂಗಳೂರು:ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯ ಘಟನೆ ಆಗದಂತೆ ನಗರದಾದ್ಯಂತ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಎಲ್ಲೆಲ್ಲಿ ಜನ ಹೆಚ್ಚು ಸೇರುತ್ತಾರೋ ಅಲ್ಲೆಲ್ಲ ಪೊಲೀಸರ ಕಾವಲು ಇದೆ. ಹಿರಿಯ ಅಧಿಕಾರಿಗಳೂ ಕೂಡ ಪರಿಶೀಲನೆ, ಭೇಟಿ ಮೂಲಕ ಕ್ರಮವಹಿಸುತ್ತಾರೆ. ಈಗಾಗಲೇ 7.5 ಸಾವಿರ ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ. ಹಾಟ್‌ಸ್ಪಾಟ್‌ಗಳಲ್ಲಿ ತಾತ್ಕಾಲಿಕವಾಗಿ ಕ್ಯಾಮ್ಯರಾಗಳ ಅಳವಡಿಕೆ ಮಾಡಲಾಗಿದೆ" ಎಂದು ತಿಳಿಸಿದರು.
ಗೃಹ ಸಚಿವ ಜಿ. ಪರಮೇಶ್ವರ್ ಮಾಧ್ಯಮ ಹೇಳಿಕೆ (ETV Bharat) ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರು ಹಾಜರ್:"ಪೊಲೀಸರು ಬಹಳ ಜನ ಮಫ್ತಿಯಲ್ಲಿ ಇರುತ್ತಾರೆ. ಏನಾದರೂ ಘಟನೆ ಆದರೆ ತಕ್ಷಣ ಕ್ರಮ ವಹಿಸಲು ಪೊಲೀಸರು ಸಿದ್ಧವಾಗಿದ್ದಾರೆ. ರಾಜ್ಯದ ಜನತೆಗೆ ಹೊಸ ವರ್ಷದ ಶುಭ ಕಾಮನೆಗಳು. ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಶುಭಾಶಯಗಳು. ಎಲ್ಲರಿಗೂ ಹರ್ಷ ತರಲಿ, ಶಾಂತಿ ಸುಖ ನೆಮ್ಮದಿ ಎಲ್ಲರಿಗೂ ಸಿಗಲಿ. ನಾವು ಗೃಹ ಇಲಾಖೆಯಿಂದ ಎಲ್ಲ ರೀತಿಯ ಅಗತ್ಯ ಕ್ರಮ ತಗೊಂಡಿದ್ದೇವೆ. ಅಹಿತಕರ ಘಟನೆ ಆಗಬಾರದು ಎಂಬುದು ನಮ್ಮ ಉದ್ದೇಶ."
"ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ ವಹಿಸಿದ್ದೇವೆ. ಕಳೆದೊಂದೂವರೆ ತಿಂಗಳಿಂದ ಕಾರ್ಯಾಚರಣೆ ಚುರುಕು ಮಾಡಿದ್ದೇವೆ. ಹೊಸ ವರ್ಷ, ಕ್ರಿಸ್ಮಸ್ ಅಂತ ಡ್ರಗ್ಸ್ ಪೂರೈಕೆ ಹೆಚ್ಚಾಗಿರುತ್ತದೆ. ಹೀಗಾಗಿ ನಾವು ಕಟ್ಟೆಚ್ಚರ ವಹಿಸಿದ್ದೇವೆ. ಕಳೆದೊಂದು ತಿಂಗಳಿಂದ ನಾವು ಡ್ರೈವ್ ಮಾಡಿ ನಿಯಂತ್ರಣ ಮಾಡ್ತಿದ್ದೇವೆ" ಎಂದರು.
ದರ್ಶನ್ ಪ್ರಕರಣದಲ್ಲಿ ಮೇಲ್ಮನವಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ನಿನ್ನೆ ಮೇಲ್ಮನವಿ ಸಲ್ಲಿಕೆಗೆ ಸರ್ಕಾರದಿಂದ ಆದೇಶ ಆಗಿದೆ. ಪೊಲೀಸರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಕೆಲಸ ಮಾಡುತ್ತಾರೆ" ಎಂದು ಉತ್ತರಿಸಿದರು.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವಾಗಿ ಮಾತನಾಡಿ, "ಪ್ರಿಯಾಂಕ್ ಖರ್ಗೆ ಭಾಗಿ ಆಗಿದ್ದಾರೆ ಅಂತ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಯಾವುದೇ ಆಧಾರ ಇಲ್ಲದೇ ಆರೋಪ ಮಾಡೋದು ಸರಿಯಲ್ಲ. ಈಗಾಗಲೇ ಪ್ರಿಯಾಂಕ್ ಖರ್ಗೆ ತಮ್ಮ ಪಾತ್ರ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಡೆತ್‌ನೋಟ್‌ನಲ್ಲೂ ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಅಂದಿದ್ದಾರೆ. ಆದರೂ ಅವರನ್ನು ಸಿಕ್ಕಿಸಲು ಬಿಜೆಪಿ ಪ್ರಯತ್ನ ಪಡುತ್ತಿದೆ, ಆಧಾರ ರಹಿತ ಆರೋಪ ಮಾಡುತ್ತಿದೆ. ಯಾವುದಾದರೂ ಆಧಾರ ಇರಬೇಕಲ್ಲ, ಸುಮ್ಮನೆ ದೂಷಣೆ ಸರಿಯಲ್ಲ. ಬಿಜೆಪಿ ಈ ಮಟ್ಟಕ್ಕೆ ಇಳಿಯಬಾರದು. ಬಿಜೆಪಿ ಅನಾವಶ್ಯಕ ಪ್ರಿಯಾಂಕ್ ಖರ್ಗೆ ಮೇಲೆ ಆಪಾದನೆ ಮಾಡುತ್ತಿದೆ ಎಂದು ಗರಂ ಆದರು.
ಅನಾವಶ್ಯಕ ಆರೋಪ ಮಾಡುವುದು ಸರಿಯಲ್ಲ:ರಾಜು ಕಪನೂರು ಬಂಧನ ಇನ್ನೂ ಆಗದ ವಿಚಾರಕ್ಕೆ, "ಅನಾವಶ್ಯಕ ಆರೋಪ ಮಾಡುವುದು ಸರಿಯಲ್ಲ. ಸಿಐಡಿಗೆ ಪ್ರಕರಣ ವಹಿಸಲಾಗಿದೆ, ತನಿಖೆ ವರದಿ ಬರಲಿ. ಹಣದ ವಿಚಾರ ನಾನು ಈಗ ಮಾತನಾಡಲ್ಲ, ತನಿಖೆಯಲ್ಲಿ ಏನು ಬರುತ್ತದೋ ನೋಡೋಣ. ಪ್ರಿಯಾಂಕ್ ಖರ್ಗೆ ಬಿಜೆಪಿ, ಜೆಡಿಎಸ್ ತಪ್ಪುಗಳನ್ನು ಹೇಳಿದ್ದಾರೆ. ಇದು ಬಿಜೆಪಿ, ಜೆಡಿಎಸ್ಗೆ ಸ್ವಾಭಾವಿಕವಾಗಿ ಹಿಡಿಸಿಲ್ಲ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ" ಎಂದರು.
ಸಿ.ಟಿ.ರವಿ ರಾಜ್ಯಪಾಲರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನೂ ಕೂಡಾ ಅದನ್ನು ಗಮನಿಸಿದೆ. ಈಗಾಗಲೇ ನಾವು ಸಿಒಡಿ ತನಿಖೆಗೆ ಕೊಟ್ಟಿದ್ದೇವೆ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ. ಪೊಲೀಸರ ತಪ್ಪು ಇದೆಯಾ?. ಅವರ ತಪ್ಪಿದೆಯಾ?. ಯಾವ ರೀತಿ ವರದಿ ಬರುತ್ತದೋ ಅದರ ಅನ್ವಯ ಕ್ರಮ ವಹಿಸಲಾಗುತ್ತದೆ. ಸಾಮಾನ್ಯವಾಗಿ ಆಪಾದನೆ ಮಾಡುತ್ತಾರೆ. ಆದರೆ, ಸರಿ ತಪ್ಪು ತನಿಖೆಯಲ್ಲಿ ಗೊತ್ತಾಗುತ್ತದೆ. ತನಿಖೆ ಆಧರಿಸಿ ಮುಂದಿನ ಕ್ರಮ" ಎಂದು ತಿಳಿಸಿದರು.
ಬಿಜೆಪಿಯಿಂದ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರಕ್ಕೆ, 'ಅವರು ಅವರ ಕೆಲಸ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ:2025ನೇ ವರ್ಷ ಸ್ವಾಗತಿಸಲು ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಿಲಿಕಾನ್ ಸಿಟಿ: ಮೆಟ್ರೋ ಸೌಲಭ್ಯವೂ ಉಂಟು