ದಕ್ಷಿಣ ವಲಯದ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಹೇಳಿಕೆ ಬೆಂಗಳೂರು :ಟ್ರೆಂಡ್ಗೆ ತಕ್ಕಂತೆ ವಂಚಿಸುವ ಸೈಬರ್ ಖದೀಮರ ಕಣ್ಣು ಇದೀಗ ಹೈಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಹೆಚ್ಎಸ್ಆರ್ಪಿ) ಮೇಲೆ ಬಿದ್ದಿದೆ. ಸುರಕ್ಷತೆ ಹಾಗೂ ಭದ್ರತೆಯ ಕಾರಣದಿಂದ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುವಂತೆ ನಿಗದಿಯಾಗಿದ್ದ ಗಡುವು ಎರಡು ತಿಂಗಳ ಕಾಲ ಸರ್ಕಾರ ವಿಸ್ತರಿಸಿದೆ. ಆದರೆ ವಂಚಕರು ಮಾತ್ರ ಫೇಕ್ ಲಿಂಕ್ ಕಳಿಸಿ ವಂಚಿಸುವ ಜಾಲ ಸಕ್ರಿಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಚ್ಎಸ್ಆರ್ಪಿ ನೋಂದಣಿ ಸಂಬಂಧ ನಕಲಿ ಲಿಂಕ್ಗಳು ಹರಿದಾಡುತ್ತಿವೆ. ರಿಜಿಸ್ಟರ್ ಮಾಡಿಕೊಳ್ಳುವ ಭರದಲ್ಲಿ ನಕಲಿ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ ಮೋಸ ಹೋಗದಿರುವಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಅಧಿಕೃತವಿರುವ ಲಿಂಕ್ ಒತ್ತಿ ನೋಂದಣಿ ಮಾಡಿಸಬೇಕು. ಈ ಬಗ್ಗೆ ಅನುಮಾನವಿದ್ದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ ಫೇಕ್ ಲಿಂಕ್ ಒತ್ತಿ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ರಕ್ಷಿತ್ ಪಾಂಡೆ ಎಂಬುವರು ವಂಚನೆಗೆ ಒಳಗಾಗಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ''ಎಚ್ಎಸ್ಆರ್ ರಿಜಿಸ್ಟರ್ ಮಾಡಿಸಲು ಆನ್ ಲೈನ್ ಗೆ ಹೋಗಿ ಲಿಂಕ್ ವೊಂದರ ಕ್ಲಿಕ್ ಮಾಡಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದೆ. ನಂತರ ಕ್ಯೂ ಆರ್ ಕೋಡ್ ಬಂದಿದ್ದು ಹಣ ಕಳುಹಿಸಿದೆ. ಮೊಹಮ್ಮದ್ ಆಸೀಫ್ ಹೆಸರು ಬಂದಾಗ ತಾನು ಮೋಸ ಹೋಗಿರುವ ಬಗ್ಗೆ ಗೊತ್ತಾಗಿದೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಹುಷಾರುಗಿರುವಂತೆ ನಗರ ಪೊಲೀಸ್ ಎಕ್ಸ್ ಖಾತೆಗೆ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ನಗರ ಪೊಲೀಸರು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ನಿಮ್ಮ ನಕಲಿ ಲಿಂಕ್ ಗಳ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ. ಈ ಬಗ್ಗೆ ಅನುಮಾನ ಬಂದರೆ ಪೊಲೀಸರ ಗಮನಕ್ಕೆ ತನ್ನಿ ಹೇಳಿದ್ದಾರೆ.
ಇನ್ನೊಂದೆಡೆ ಈ ಕುರಿತು ದಕ್ಷಿಣ ವಲಯದ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾತನಾಡಿದ್ದು, ಹೆಚ್ಎಸ್ಆರ್ಪಿ ಹೆಸರಿನಲ್ಲಿ ವಂಚನೆಗೆ ಯತ್ನ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಲಿಂಕ್ ಗಳು ಶೇರ್ ಆಗುತ್ತಿವೆ. ಇದರ ಬಗ್ಗೆ ಸ್ವಲ್ಪ ಎಚ್ಚರ ಇರಲಿ. ಅಧಿಕೃತ ಜಾಲತಾಣ ಮೂಲಕ ಮಾತ್ರ ನೀವು ಅಪ್ಲೈ ಮಾಡಬೇಕು. ಒಮ್ಮೆ ವೆಬ್ಸೈಟ್ ಸರಿಯಾಗಿದೆಯಾ ಅಂತಾ ನೋಡಿಕೊಂಡು ಪಾವತಿಸಿ. ಸಮಸ್ಯೆಯಾದರೆ ಕೂಡಲೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ. ನಕಲಿ ಲಿಂಕ್ ಹರಿದಾಡುತ್ತಿರುವ ಬಗ್ಗೆ ಸೆನ್ ಠಾಣೆಯವರಿಗೆ ಮಾಹಿತಿ ನೀಡುತ್ತೇವೆ. ಹೆಚ್ಎಸ್ಆರ್ಪಿ ರಿಜಿಸ್ಟ್ರೇಷನ್ ಬಗ್ಗೆ ಗಮನಹರಿಸುವಂತೆ ಡಿಸಿಪಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ :HSRP ನಂಬರ್ ಪ್ಲೇಟ್ ಅಳವಡಿಕೆ: ಜಿಲ್ಲೆಗಳ ಹೆಚ್ಚಿನ ಕಡೆ ನೋಂದಣಿ ಕೇಂದ್ರ ಸ್ಥಾಪಿಸಲು ಚಿಂತನೆ- ಸಚಿವ ರಾಮಲಿಂಗಾ ರೆಡ್ಡಿ