ಹುಬ್ಬಳ್ಳಿ:"ಅಮರಗೋಳದ ಹೊರವಲಯದಲ್ಲಿ ಜನವರಿ 14ರಂದು ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವಾಗಲೇ ಮಹತ್ವದ ಮಾಹಿತಿ ಲಭ್ಯವಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ" ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹುಬ್ಬಳ್ಳಿ ಗೋಕುಲ್ ರಸ್ತೆಯ ಬಂಜಾರ ಕಾಲೊನಿಯ ನಿವಾಸಿಯಾದ ಚಂದ್ರಶೇಖರ ಲಮಾಣಿ (47) ಎಂಬ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದ. ಈ ಕುರಿತಂತೆ ಪತ್ನಿ ಮಂಜುಳಾ ದೂರು ನೀಡಿದ್ದರು. ಆದರೆ ಇದು ಕೊಲೆ ಎಂದು ಮೃತನ ಸಹೋದರ ಸುರೇಶ್ ಲಮಾಣಿ ಕೂಡ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಚಂದ್ರಶೇಖರ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿರುವುದು ಕಂಡುಬಂದಿದೆ" ಎಂದು ತಿಳಿಸಿದರು.
ಪ್ರಕರಣವೇನು?: ಜನವರಿ 14ರಂದು ಎಪಿಎಂಸಿ ಮಾರಡಗಿ ರೋಡ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸರು ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಮೃತನನ್ನು ಬಂಜಾರ ಕಾಲೊನಿ ನಿವಾಸಿ ಚಂದ್ರಶೇಖರ ಲಮಾಣಿ(40) ಎಂದು ಗುರುತಿಸಲಾಗಿತ್ತು. ಪತ್ನಿ ಮಂಜುಳಾ, ತನ್ನ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಎಂದು ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಎಲ್ಲ ಮೂಲಗಳಿಂದ ತನಿಖೆ ಮಾಡಿ ಸತ್ಯಾಂಶ ಹೊರಹಾಕಿದ್ದಾರೆ.