ಬೆಂಗಳೂರು:ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ ಅನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಹಾಗೂ ಸ್ವೀಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಮೂಲದ ಶ್ರೀನಿವಾಸ್ ಹಾಗೂ ಕೇರಳ ಮೂಲದ ಶಫೀಕ್ ಬಂಧಿತರು. ಆರೋಪಿತರಿಂದ 10.50 ಲಕ್ಷ ರೂ. ಮೌಲ್ಯದ 52 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಾತ್ರೆ, ಸಮಾರಂಭಗಳಲ್ಲಿ ಮೊಬೈಲ್ ಫೋನ್ ಎಗರಿಸುತ್ತಿದ್ದ ಶ್ರೀನಿವಾಸ್ ಹಾಗೂ ಆತನ ಸಹಚರರು, ಅವುಗಳನ್ನು ಕೊರಿಯರ್ ಮೂಲಕ ಕೇರಳದ ಶಫೀಕ್‌ಗೆ ತಲುಪಿಸುತ್ತಿದ್ದರು. ಅದೇ ರೀತಿ ಇತ್ತೀಚೆಗೆ ಆರೋಪಿಗಳು ಕೇರಳದ ವಿಳಾಸಕ್ಕೆ ಕಳುಹಿಸಿದ್ದ ಕೊರಿಯರ್ ಬಾಕ್ಸ್ಗಳನ್ನು ಯಾರೂ ಸ್ವೀಕರಿಸದ ಕಾರಣ ವಾಪಸ್ ಬಂದಿತ್ತು. ಬಾಕ್ಸ್ ಕೊರಿಯರ್ ಮಾಡಿದ್ದ ವ್ಯಕ್ತಿಗೆ ಹಲವು ಬಾರಿ ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಬಳಿಕ, ಕೊರಿಯರ್ ಕಂಪನಿ ಸಿಬ್ಬಂದಿ ಬಾಕ್ಸ್ ಅನ್ನು ಓಪನ್ ಮಾಡಿ ನೋಡಿದಾಗ 12 ಮೊಬೈಲ್ ಫೋನ್‌ಗಳು ಇರುವುದು ಪತ್ತೆಯಾಗಿತ್ತು. ಬಳಿಕ ಕೊರಿಯರ್ ಕಂಪನಿಯವರು ಚಂದ್ರಾಲೇಔಟ್ ಠಾಣೆಗೆ ತಂದುಕೊಟ್ಟು ದೂರು ದಾಖಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.