ಬೆಂಗಳೂರು:ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಪ್ರಕರಣದ ಮತ್ತಿಬ್ಬರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಹನುಮಂತಪ್ಪ ಹಾಗೂ ವಿಜಯಪುರದ ಬಿರಾದಾರ್ ಬಂಧಿತರು. ಈಗಾಗಲೇ ಬಂಧಿತನಾಗಿರುವ ಆರೋಪಿ ಗೋವಿಂದರಾಜು ಜೊತೆ ಸಂಪರ್ಕದಲ್ಲಿದ್ದ ಇವರು, ರಾಜ್ಯದ ವಿವಿಧೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳನ್ನು ಗೋವಿಂದರಾಜುಗೆ ಪರಿಚಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಗೋವಿಂದರಾಜುನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದರು. ಮೆಜೆಸ್ಟಿಕ್‌ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ, ಅಭ್ಯರ್ಥಿಗಳನ್ನು ಸಂಪರ್ಕಿಸಿ, 'ನನಗೆ ಪರೀಕ್ಷೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳ ಪರಿಚಯವಿದೆ. ಪಾಸ್ ಮಾಡಿಸಿ ಹುದ್ದೆ ಕೊಡಿಸುವೆ' ಎಂದು ನಂಬಿಸುತ್ತಿದ್ದ. ಪಿಡಿಒ ಹುದ್ದೆಗೆ 25 ಲಕ್ಷ ಹಾಗೂ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿಗೆ ಮಾತನಾಡಿಕೊಂಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಈತನಿಂದ ವಶಕ್ಕೆ ಪಡೆದಿದ್ದ ನಾಲ್ಕು ಮೊಬೈಲ್ ಫೋನ್‌ಗಳಲ್ಲಿ ಆರೋಪಿಗಳಾದ ಹನುಮಂತಪ್ಪ ಹಾಗೂ ಬಿರಾದಾರ್‌ನೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ಪತ್ತೆಯಾಗಿತ್ತು.
ಇದನ್ನೂ ಓದಿ:ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸಲು ಹಣ ವಸೂಲಿ ಆರೋಪ; ರೈಲ್ವೆ ಇಲಾಖೆಯ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಬಂಧನ - COLLECTING MONEY TO PASS EXAMS