ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯನ್ನ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಕರಣವೊಂದರಲ್ಲಿ ನ್ಯಾಯ ಕೊಡಿಸುವಂತೆ ಫೆ.2 ರಂದು ಯಡಿಯೂರಪ್ಪ ಅವರ ಮನೆಗೆ ತೆರಳಿದ್ದ ವೇಳೆ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ದೂರುದಾರರು ಗುರುವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ
ಯಡಿಯೂರಪ್ಪನವರ ಹೇಳಿಕೆ ಪಡೆದ ಪೊಲೀಸರು:ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.
ಮಹಿಳೆಯೊಬ್ಬರು ನೀಡಿರುವ ದೂರಿನಡಿ ಎಫ್ಐಆರ್ ದಾಖಲಾಗಿರುವ ಹಿನ್ನೆಲೆ ಸದಾಶಿವ ನಗರ ಪೊಲೀಸರು ಹಾಗು ಹೈಗ್ರೌಂಡ್ಸ್ ಠಾಣೆ ಪೊಲೀಸರು ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಭೇಟಿ ನೀಡಿದರು. ಆರೋಪ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಹೇಳಿಕೆ ಪಡೆದುಕೊಂಡರು. ಲಿಖಿತ ಹೇಳಿಕೆಗೆ ಯಡಿಯೂರಪ್ಪ ಅವರಿಂದ ಸಹಿ ಪಡೆದುಕೊಂಡು ನಿರ್ಗಮಿಸಿದರು.
ಆರೋಪ ಕುರಿತು ಪರಿಶೀಲನೆ ನಡೆಸಿದ್ದು, ಬಿಎಸ್ವೈ ನಿವಾಸದ ಸಿಬ್ಬಂದಿ ಹೇಳಿಕೆ ಪಡೆಯುವ ಸಾಧ್ಯತೆ ಇದೆ. ಸಧ್ಯ ಯಡಿಯೂರಪ್ಪ ಅವರಿಂದ ಮಾತ್ರ ಹೇಳಿಕೆ ಪಡೆದಿದ್ದು, ತನಿಖೆಯ ಮುಂದಿನ ಹಂತದಲ್ಲಿ ಇತರರ ವಿಚಾರಣೆ ನಡೆಸುವ ಅಥವಾ ಹೇಳಿಕೆ ಪಡೆಯುವ ಸಾಧ್ಯತೆ ಇದೆ.
ಸಿಐಡಿಗೆ ವರ್ಗಾವಣೆ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಡಿಜಿ & ಐಜಿಪಿ ಅಲೋಕ್ ಮೋಹನ್ ಅವರು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಮಹಿಳಾ ಅಧಿಕಾರಿ ನೇತೃತ್ವದ ತನಿಖಾ ತಂಡ ಕೈಗೊಳ್ಳಲಿದೆ.
ಓದಿ:ರಾಜಕೀಯದ ಸವಾಲುಗಳನ್ನು ಅರಿತುಕೊಂಡೇ ಬಂದಿದ್ದೇನೆ: ಯದುವೀರ್ ಒಡೆಯರ್
ಬಿಎಸ್ವೈ ಪ್ರತಿಕ್ರಿಯೆ:ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕಾನೂನಿನ ರೀತಿ ಎದುರಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ಮಾಡಲ್ಲ. ಒಂದೂವರೆ ತಿಂಗಳ ಹಿಂದೆ ತಾಯಿ ಮಗಳು ಕಣ್ಣೀರು ಹಾಕುವುದನ್ನುನೋಡಿ ಒಮ್ಮೆ ಒಳಗಡೆ ಕರೆಸಿ ಕೂರಿಸಿ ಸಮಸ್ಯೆಯನ್ನ ಆಲಿಸಿದೆ. ಅನ್ಯಾಯ ಆಗಿದೆ ಎಂದು ನೋವು ತೋಡಿಕೊಂಡಿದ್ದರಿಂದ ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ನ್ಯಾಯ ಒದಗಿಸಿ ಕೊಡಿ ಎಂದು ಕೋರಿದ್ದೆ. ಆ ಬಳಿಕ ಈ ಮಹಿಳೆ ಇದನ್ನ ಬೇರೆ ರೀತಿ ಮಾಡಿ ದೂರು ದಾಖಲಿಸಲಾಗಿದೆ. ಉಪಕಾರ ಮಾಡಲು ಹೋದರೆ ಹೇಗಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಧ್ಯಮದವರ ಜೊತೆ ಮಾತನಾಡಿದರು.