ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಪ್ರಧಾನಿ ಮೋದಿ ಇಂದು 10ನೇ ಬಾರಿ ಭೇಟಿ: ರೋಡ್ ಶೋ‌ಗೆ ಭರ್ಜರಿ ತಯಾರಿ - Modi road show - MODI ROAD SHOW

ಇಂದು ರಾತ್ರಿ ಮಂಗಳೂರಿನಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್​ ಶೋಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭರ್ಜರಿ ತಯಾರಿ
ಭರ್ಜರಿ ತಯಾರಿ

By ETV Bharat Karnataka Team

Published : Apr 14, 2024, 12:38 PM IST

ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿಗೆ ಆಗಮಿಸಲಿದ್ದು, ರಾತ್ರಿ ರೋಡ್​ ಶೋ ನಡೆಸಲಿದ್ದಾರೆ.

ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ‌ ಆಗಮಿಸುವ ಅವರು ಕೆಂಜಾರಿನಿಂದ ನೇರವಾಗಿ ಲೇಡಿಹಿಲ್ ನಾರಾಯಣ ಗುರು ವೃತ್ತಕ್ಕೆ ಆಗಮಿಸಿ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ರಾತ್ರಿ 7.45 ಕ್ಕೆ ರೋಡ್ ಶೋ ಆರಂಭವಾಗಲಿದೆ. ಲಾಲ್ ಭಾಗ್, ಬಲ್ಲಾಳ್ ಭಾಗ್, ಪಿವಿಎಸ್ ಮೂಲಕ ರೋಡ್ ಶೋ ಬಂದು ನವಭಾರತ ವೃತ್ತದಲ್ಲಿ ರೋಡ್ ಶೋ ಸಮಾಪ್ತಿಯಾಗಲಿದೆ. ಅಲ್ಲಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿ ವಿಶೇಷ ವಿಮಾನ ಮೂಲಕ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮಂಗಳೂರಿನಲ್ಲಿ ಇಂದು ಮೋದಿ ರೋಡ್ ಶೋಗಾಗಿ ಭರ್ಜರಿ ತಯಾರಿ ನಡೆದಿದೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಮೋದಿ ರೋಡ್ ಶೋ ಹಿನ್ನೆಲೆ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊರ ಜಿಲ್ಲೆಗಳ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆ ಹೊಣೆ ಹೊತ್ತ ಎಸ್‌ಪಿಜಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದೆ. ಮೋದಿ ರೋಡ್ ಶೋ ನಡೆಸುವ ರಸ್ತೆಯುದ್ದಕ್ಕೂ ಬ್ಯಾರಿಕೇಡ್​ ಅಳವಡಿಕೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 60 ಮಂದಿ ಶಸ್ತ್ರಸಜ್ಜಿತ ಅಧಿಕಾರಿಗಳು ಮೋದಿಗೆ ಬೆಂಗಾವಲಾಗಿ ಇರಲಿದ್ದಾರೆ. ರೋಡ್​ ಶೋ ಪ್ರದೇಶವನ್ನು ಏರಿಯಲ್​ ವ್ಯೂ ಮೂಲಕ ಪರಿಶೀಲನೆ ನಡೆಸಲಾಗಿದೆ‌.

ಅಣಕು ರೋಡ್​​ ಶೋ:ಶನಿವಾರ ರಾತ್ರಿ ವೇಳೆ ಎಸ್‌ಪಿಜಿ ನೇತೃತ್ವದಲ್ಲಿ ಪೊಲೀಸರು ರಿಹರ್ಸಲ್, ಅಣಕು ರೋಡ್‌ ಶೋ ನಡೆಸಿದರು. ಈ ಸಂದರ್ಭ ಕೆಂಜಾರು ವಿಮಾನ ನಿಲ್ದಾಣದಿಂದ ಮೋದಿಯವರು ಆಗಮಿಸಿ ನವಭಾರತ ವೃತ್ತದವರೆಗೆ ರೋಡ್​ ಶೋ ನಡೆಸುವುದನ್ನು ರಿಯಲ್ ಟೈಂ ರೀತಿಯಲ್ಲಿ ನಡೆಸಲಾಯಿತು. ಜೊತೆಗೆ ರೋಡ್ ಶೋ ಸಾಗುವ ರಸ್ತೆಯ ಬದಿಯಲ್ಲಿನ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಬ್ಯಾನರ್​ಗಳು, ಇಂಟರ್‌ನೆಟ್ ಕೇಬಲ್‌ಗಳನ್ನೂ ತೆರವುಗೊಳಿಸಲಾಗಿದೆ. ಅಲ್ಲಲ್ಲಿ ಸಾಂಸ್ಕೃತಿಕ ಪ್ರದರ್ಶನಗಳಿರಲಿದ್ದು, ಅದಕ್ಕೂ ಭರದ ಸಿದ್ದತೆ ನಡೆದಿದೆ.

ಮಂಗಳೂರಿಗೆ ಮೋದಿಯ 10 ನೇ ಭೇಟಿ:

ಮಂಗಳೂರಿಗೆ ಇಂದು ಹತ್ತನೇ ಬಾರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಹಿಂದಿನ 9 ಭೇಟಿಗಳ ವಿವರ ಈ ಕೆಳಗಿನಂತಿದೆ.

1. 2013 - ಗುಜರಾತ್ ಸಿಎಂ ಆಗಿದ್ದ ಮೋದಿಯವರು ಆಗ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು.
2. 2014 - ಲೋಕಸಭಾ ಚುನಾವಣಾ ಪ್ರಚಾರಕ್ಕೂ ಮೋದಿ ಆಗಮಿಸಿ, ಸಮಾವೇಶದಲ್ಲಿ ಮಾತನಾಡಿದ್ದರು.

3. 2016 - ಪ್ರಧಾನಿಯಾದ ಬಳಿಕ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು.

4. 2017 - ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್​ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು.

5. 2017 - ಮೋದಿ ಲಕ್ಷದ್ವೀಪಕ್ಕೆ ಹೋಗುವುದಕ್ಕಾಗಿ ಒಂದು ರಾತ್ರಿ ಮಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವುದು ಮಧ್ಯರಾತ್ರಿ ಆಗಿತ್ತು.

6. 2018 - ಅಸೆಂಬ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಮೋದಿ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.

7. 2019 - ಚುನಾವಣ ಪ್ರಚಾರ ಸಮಾವೇಶಕ್ಕೆ ಬಂದಿದ್ದ ಮೋದಿ, ನೆಹರು ಮೈದಾನದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಹಂಪನಕಟ್ಟೆ ಬಳಿ ಭರ್ಜರಿ ಜನ ಸೇರಿತ್ತು. ಜನರ ಉತ್ಸಾಹ ನೋಡಿ ಮೋದಿ ಕಾರಿನ ಬಾಗಿಲು ತೆರೆದು ಜನರ ಕೈ ಕುಲುಕಿದ್ದರು.

8. 2022 - ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆಂದು ಮಂಗಳೂರಿಗೆ ಆಗಮಿಸಿದ್ದರು.

9. 2023 - ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಾಗಿ ಮೂಲ್ಕಿಗೆ ಆಗಮಿಸಿದ್ದರು.

ಇದನ್ನೂ ಓದಿ:ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ: ಸಂವಿಧಾನ ಶಿಲ್ಪಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಗೌರವ ನಮನ - Ambedkar Jayanti

ABOUT THE AUTHOR

...view details