ಬೆಳಗಾವಿ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದು, ಐಟಿಸಿ ವೆಲ್ ಕಮ್ ಹೋಟೆಲ್ನಲ್ಲಿ ತಂಗಿದ್ದಾರೆ. ಇಂದು ಬೆಳಗಾವಿ ನಗರದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಬಿಜೆಪಿ ಅಭ್ಯರ್ಥಿಗಳ ಪರ ಅವರು ಮತಬೇಟೆ ನಡೆಸಲಿದ್ದಾರೆ. ಬಳಿಕ ಶಿರಸಿ, ದಾವಣಗೆರೆ ಹಾಗು ಬಳ್ಳಾರಿಯಲ್ಲಿ ಮೆಗಾ ರ‍್ಯಾಲಿ ನಡೆಸಲಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೇರಿ ಪ್ರಮುಖ ನಾಯಕರು ಸ್ವಾಗತಿಸಿದರು. ಹೋಟೆಲ್ಗೆ ಆಗಮಿಸುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಅಭಿಮಾನಿಗಳು ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದರು. ಮೋದಿ ಮುಗುಳ್ನಕ್ಕು ಮಾಧ್ಯಮಗಳಿಗೆ ಕೈ ಬೀಸಿ ಹೋಟೆಲಿನೊಳಗೆ ಹೋದರು. ಹೋಟೆಲ್ ಸುತ್ತ ಎಸ್ಪಿಜಿ ಮತ್ತು ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಮೊದಲ ಬಾರಿಗೆ ಬೆಳಗಾವಿಯಲ್ಲಿ ವಾಸ್ತವ್ಯ:ಇದೇಮೊದಲ ಬಾರಿಗೆ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿಗೆ ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ತಯಾರಿಸಲಾಗಿತ್ತು.
1. ಬೆಳಗಾವಿಯಲ್ಲಿ ಸಮಾವೇಶ: ಇಂದು ಬೆಳಗ್ಗೆ 10 ಗಂಟೆಗೆ ಮೋದಿ, ಮಾಲಿನಿ ಸಿಟಿ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಹಾಗೂ ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾಸಾಹೇಬ್ ಜೊಲ್ಲೆ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.