ಬೆಂಗಳೂರು:''ಪ್ರಧಾನಿ ನರೇಂದ್ರ ಮೋದಿಯವರ ರಾಮ ರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸಂಜೆ ಮನೆಮನೆಗಳಲ್ಲಿ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ದೀಪಗಳನ್ನು ಹಚ್ಚಲಾಯಿತು. ಪಕ್ಷದ ಕಾರ್ಯಕರ್ತರು ಒಟ್ಟು 1,008 ದೀಪಗಳನ್ನು ಹಚ್ಚುವ ಮೂಲಕ ಅಯೋಧ್ಯೆ ದೀಪಾವಳಿ ಆಚರಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ವಿಜಯೇಂದ್ರ, ''ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ. ದೇಶದ ಪ್ರತಿಯೊಂದು ರಾಜ್ಯವನ್ನು ಪ್ರಗತಿಪಥದಲ್ಲಿ ಒಯ್ಯುವ ಹಾಗೂ 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಅವರು ಸಂಕಲ್ಪ ತೊಟ್ಟಿದ್ದಾರೆ. ಅದು ನನಸಾಗಲಿದೆ ಎನ್ನುತ್ತಾ ಮೋದಿ ಅವರ ಕರೆಗೆ ಓಗೊಟ್ಟು ಅಯೋಧ್ಯೆ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ದೀಪ ಹಚ್ಚಿದ ಹಿಂದೂಗಳಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಜನರ ನಿರೀಕ್ಷೆ, ಕೋಟಿ ಕೋಟಿ ರಾಮ ಭಕ್ತರ ಅಪೇಕ್ಷೆಯಂತೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ದೇಶದ ಮೂಲೆಮೂಲೆಯಿಂದ ಬಂದ ಸಾಧು ಸಂತರ ಸಮಕ್ಷಮದಲ್ಲಿ ಇದು ನಡೆದಿದೆ. ದೇಶದ ಪ್ರತಿಯೊಬ್ಬ ಹಿಂದೂಗಳ ಹೃದಯದಲ್ಲಿ ಪ್ರಭು ಶ್ರೀರಾಮನ ಭಕ್ತಿ-ಶ್ರದ್ಧೆಯ ಜಾಗೃತಿ ಮೂಡಿದೆ. ಪ್ರಾಣ ಪ್ರತಿಷ್ಠಾಪನೆಯು ಎಲ್ಲ ಹಿಂದೂಗಳ ಹಬ್ಬವಾಗಿ ಆಚರಣೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.